ಬೆಂಗಳೂರು:ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿತು.
ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಯಡಿಯೂರಪ್ಪ ಪರ ವಕೀಲರು, ಅರ್ಜಿದಾರರಿಗೆ 82 ವರ್ಷ ವಯಸ್ಸಾಗಿದೆ. ಅವರ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತ ಬಾಲಕಿಯ ದೂರುದಾರ ತಾಯಿಯ ನಡವಳಿಕೆಯನ್ನು ಗಮನಿಸಬೇಕು. ಅಧಿಕಾರಿಗಳು, ಸಂಬಂಧಿಗಳು, ರಾಜಕಾರಣಿಗಳ ಮೇಲೆ ಸುಮಾರು 56 ದೂರು ನೀಡಿದ್ದಾರೆ. ಘಟನೆ ನಡೆದ ಒಂದೂವರೆ ತಿಂಗಳ ನಂತರ ಮಾರ್ಚ್ 14ರಂದು ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಹೇಳಿಕೆ ಆಧರಿಸಿ ಆರೋಪ ಪಟ್ಟಿ ದಾಖಲಿಸಲಾಗಿದೆ. ಅರ್ಜಿದಾರರು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ಬಾಲಕಿ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ಹಲವು ಜನರಿದ್ದು ಅವರ ಸಮ್ಮುಖದಲ್ಲಿ ಈ ಘಟನೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆರೋಪಪಟ್ಟಿಯಲ್ಲಿನ ಸಾಕ್ಷಿಗಳು ನೀಡಿರುವ ಹೇಳಿಕೆಗಳಂತೆ, ಅರ್ಜಿದಾರರಿಗೆ ಕೈ ನಡುಗುತ್ತದೆ. ಲೈಟ್ ಸ್ವಿಚ್ ಹಾಕಲೂ ಅವರು ಇತರರಿಗೆ ಹೇಳುತ್ತಾರೆ. ದೂರುದಾರ ಮಹಿಳೆ, ಮಗಳೊಂದಿಗೆ ರೂಮಿಗೆ ಹೋಗಿರಲಿಲ್ಲವೆಂದು ಸಾಕ್ಷಿಯ ಹೇಳಿಕೆ ಇದೆ. ಅಂಗರಕ್ಷಕರು ಅರ್ಜಿದಾರರ ಸುತ್ತಮುತ್ತಲೇ ಇರುತ್ತಾರೆ ಎಂದು ಪೀಠಕ್ಕೆ ವಿವರಿಸಿದರು.