ಬಾಗಲಕೋಟೆ :ನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲಾದ್ಯಂತ ಏಳು ವಿಧಾನಸಭಾ ಮತಕ್ಷೇತ್ರಗಳಲ್ಲಿ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆದು, ಪತ್ರಿಶತ 73 ರಷ್ಟು ಮತದಾನ ಆಗಿರುವ ಬಗ್ಗೆ ವರದಿಯಾಗಿದೆ.
ಬೆಳಗ್ಗೆಯಿಂದಲೇ ವೃದ್ದರು, ವಿಶೇಷ ಚೇತನರು, ಮಹಿಳೆಯರು, ಯುವ ಮತದಾರರು ಉತ್ಸುಕರಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಕಂಡು ಬಂತು. ಬಹುತೇಕ ಮತಗಟ್ಟೆಗಳಲ್ಲಿ ಮಹಿಳಾ ಮತದಾರರಲ್ಲಿ ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು, ಮತದಾರರಿಗೆ ವಿಶ್ರಾಂತಿ ಕೊಠಡಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯ ಮಾದ್ಯಮ ತಂಡ ಮತದಾನದ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಕಂಡುಬಂತು.
ಬೀಳಗಿ ಮತಕ್ಷೇತ್ರದ ಹೂಲಗೇರಿ ಗ್ರಾಮದಲ್ಲಿ ಮ.ಸಂ.220ರಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಒಟ್ಟು 222 ಮತ ಚಲಾವಣೆಗೊಂಡಿದ್ದವು. ಅದರಲ್ಲಿ 110 ಪುರುಷರು, 112 ಜನ ಮಹಿಳೆಯರು ಮತ ಚಲಾಯಿಸಿದ್ದರು. ಮ.ಸಂ221 ರಲ್ಲಿ 691 ಪೈಕಿ 281, ಬಾದಾಮಿ ಮತಕ್ಷೇತ್ರದ ಕಟಗೇರಿ ಮ. ಸಂ 7ರಲ್ಲಿ 12 ಗಂಟೆ ಅವಧಿಯಲ್ಲಿ 784 ಪೈಕಿ 259, ಮ.ಸಂ 5ರಲ್ಲಿ 908 ಮತದಾರರ ಪೈಕಿ 282, ಮ.ಸಂ 6ರಲ್ಲಿ 807 ಪೈಕಿ 254, ತಿಮ್ಮಸಾಗರದಲ್ಲಿ ಮ. ಸಂ.15ರಲ್ಲಿ 856 ಪೈಕಿ 302, ಮ ಸಂ.16 ರಲ್ಲಿ 508 ಪೈಕಿ 241, ಲಿಂಗಾಪೂರ ಗ್ರಾಮದ ಮಸಂ 12 ರಲ್ಲಿ 1057 ಪೈಕಿ 347 ಮತ ಚಲಾವಣೆಗೊಂಡಿದ್ದವು. ಅದರಲ್ಲಿ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತ ಚಲಾಯಿಸಿರುವ ಬಗ್ಗೆ ವರದಿಯಾಗಿರುವುದು ಕಂಡು ಬಂದಿತು.
ಬೆಳಗ್ಗೆ 7 ರಿಂದ 9 ಗಂಟೆಯಲ್ಲಿ ಶೇ. 8.59 ರಷ್ಟು ಮತದಾನವಾದರೆ, 11ರ ವರೆಗೆ ಶೇ.23.80 ರಷ್ಟು, ಮಧ್ಯಾಹ್ನ 1 ವರೆಗೆ ಶೇ.42.01 ರಷ್ಟು, ಮಧ್ಯಾಹ್ನ 3 ವರೆಗೆ 55.15 ರಷ್ಟು, ಸಂಜೆ 5 ವರೆಗೆ ಶೇ.67.57 ರಷ್ಟು ಮತದಾನವಾಗಿರುವ ವರದಿಯಾಗಿದ್ದು ಕಂಡುಬಂತು. ಸಂಜೆ 5 ಗಂಟೆಯ ವರದಿಯಲ್ಲಿ ಜಿಲ್ಲೆಯ ಏಳು ಮತಕ್ಷೇತ್ರಗಳ ಪೈಕಿ ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚು ಮತದಾನವಾದರೆ, ಬಾಗಲಕೋಟೆ ಮತ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ ವರದಿಯಾಗಿದೆ. ಮುಕ್ತ, ಶಾಂತಿಯುವ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿತ್ತು.
ಮತದಾನ ಕಾರ್ಯಕ್ಕೆ 9274 ಮತಗಟ್ಟೆ ಸಿಬ್ಬಂದಿ ಹಾಗೂ 1519 ಪೊಲೀಸ್ ಸಿಬ್ಬಂದಿ, 418 ಹೋಮ್ ಗಾರ್ಡ್, 3 ಕೆ.ಎಸ್.ಆರ್.ಪಿಯ 85 ಸಿಬ್ಬಂದಿ ಸೇರಿ ಒಟ್ಟು 3500 ಸಿಬ್ಬಂದಿ ನೇಮಕ ಮಾಡಲಾಗಿತ್ತು. 1683 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಸಹ ಮಾಡಲಾಗಿತ್ತು. ಬೆಳಗ್ಗೆ 7 ರಿಂದ ಸಂಜೆ 6 ವರೆಗೆ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ನಡೆದ ವರದಿಯಾಗಿದೆ.
ಡಿಸಿ, ಸಿಇಒ ವಿಶೇಷ ಮತಗಟ್ಟೆಗಳಿಗೆ ಭೇಟಿ: ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಬಾಗಲಕೋಟೆ ನವನಗರದ ಮಸಂ.166 ಮತ್ತು 179 ರಲ್ಲಿ ಸ್ಥಾಪಿಸಲಾದ ಮಹಿಳಾ ಸಖಿ ಮತಗಟ್ಟೆಗಳಿಗೆ ತೆರಳಿ ಮತಗಟ್ಟೆ ಮತ್ತು ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದರು. ಜಿ.ಪಂ ಸಿಇಓ ಶಶಿಧರ ಕುರೇರ ಮುಚಖಂಡಿ ಎಲ್.ಟಿ-1ರಲ್ಲಿ ಸ್ಥಾಪಿಸಲಾದ ಸಾಂಪ್ರದಾಯಿಕ ಮತಗಟ್ಟೆ, ಬಾದಾಮಿ ತಾಲೂಕಿನ ಸೂಳಿಕೇರಿ, ಬಾದಾಮಿ, ಚೊಳಚಗುಡ್ಡ, ಗುಡೂರ, ಇಲಕಲ್, ಹುನಗುಂದ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.