ರಾಮನಗರ:ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ಶಾಂತಿಯುವಾಗಿ ನಡೆಯಿತು. ಬುಧವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಕ್ಷೇತ್ರದಲ್ಲಿ ಒಟ್ಟು 2,06,866 ಮತದಾರರು ತಮ್ಮ ಹಕ್ಕು ಚಲಾಯಿಸಿದರು. 276 ಮತಗಟ್ಟೆಯಲ್ಲಿ ಮತದಾನ ನಡೆಯಿತು.
ಚನ್ನಪಟ್ಟಣದಲ್ಲಿ 1,00,501 ಪುರುಷ ಮತದಾರರು ಹಾಗೂ 1,06,362 ಮಹಿಳಾ ಮತದಾರರು ಮತ್ತು ಇತರೆ 3 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 2,06,866 ಮತಗಳು ಚಲಾವಣೆಯಾಗಿವೆ. ಈ ಮೂಲಕ ಅಂದಾಜು ಶೇ.88.80ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಯಶವಂತ್ ವಿ.ಗುರುಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮತ್ತು ಶೀಲಾ ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಯೋಗೇಶ್ಬರ್, ''ಈ ಚುನಾವಣೆಯಲ್ಲಿ ಜನರು ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ. ಇಲ್ಲಿ ಅಭಿವೃದ್ಧಿ ಕೆಲಸಗಳು ವರ್ಕ್ ಆಗುತ್ತಿದೆ. ನೀರಾವರಿ ಅಭಿವೃದ್ಧಿ ಆದಾಗ ಕ್ರೆಡಿಟ್ಗೆ ಬಹಳ ಜನರು ಇರುತ್ತಾರೆ. ಕುಮಾರಸ್ವಾಮಿ ಮೊದಲು ಸಿಎಂ ಆಗಿದ್ದಾಗ ನೀರಾವರಿ ವಿಚಾರವೇ ಇರಲಿಲ್ಲ. ಆದರೆ, ಯೋಜನೆ ಯಶಸ್ವಿ ಆದ ನಂತರ ಎಲ್ಲರೂ ಇರ್ತಾರೆ'' ಎಂದು ದೇವೇಗೌಡರು - ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಕುಮಾರಸ್ವಾಮಿ ಬಗ್ಗೆ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿ, ''ಅದು ನನಗೆ ಗೊತ್ತಿಲ್ಲ, ಅದ್ಯಾವುದು ಈ ಚುನಾವಣೆಯಲ್ಲಿ ವರ್ಕ್ ಆಗಲ್ಲ'' ಎಂದರು.
ಆಂಜನೇಯಸ್ವಾಮಿ ಸನ್ನಿಧಿಗೆ ನಿಖಿಲ್ ಭೇಟಿ: ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಪ್ರಸಿದ್ದ ಕೆಂಗಲ್ ಆಂಜನೇಯಸ್ವಾಮಿಯ ಸನ್ನಿಧಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ವಾರ್ಡ್ ನಂಬರ್ ಮೂರಕ್ಕೆ ಭೇಟಿ ನೀಡಿದ ನಿಖಿಲ್, ಕಾರ್ಯಕರ್ತರೊಂದಿಗೆ ಕೆಲವು ಹೊತ್ತು ಮಾತುಕತೆ ನಡೆಸಿದರು. ಭೇಟಿಯ ವೇಳೆ ಕಾರ್ಯಕರ್ತರ ಮನೆಯಲ್ಲಿ ಒಬ್ಬಟ್ಟು ಸೇವಿಸಿದರು.