ಕರ್ನಾಟಕ

karnataka

ETV Bharat / state

ಬಲಿಯೇಂದ್ರ.. ಕೂ... ಕೂ..: ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ: ಸಾಂಪ್ರದಾಯಿಕ ಮಹತ್ವ ಹೀಗಿದೆ!

ದಕ್ಷಿಣ ಕನ್ನಡದಲ್ಲಿ ಪರ್ಬ ಎಂದು ಕರೆಯುವ ದೀಪಾವಳಿಯನ್ನು ಹೇಗೆ ಆಚರಿಸುತ್ತಾರೆ ಎಂಬ ಬಗ್ಗೆ ತುಳು ಜಾನಪದ ತಜ್ಞ ಕೆ.ಕೆ. ಪೇಜಾವರ ಅವರೊಂದಿಗೆ ನಮ್ಮ ವರದಿಗಾರ ವಿನೋದ್​ ಪುದು ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ
ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ (ETV Bharat)

By ETV Bharat Karnataka Team

Published : Oct 31, 2024, 10:59 AM IST

ಮಂಗಳೂರು:ಕರ್ನಾಟಕದ ಕರಾವಳಿ ಪ್ರದೇಶ, ವಿಶೇಷವಾಗಿ ತುಳುನಾಡಿನಲ್ಲಿ, ದೀಪಾವಳಿ ಹಬ್ಬವು "ಪರ್ಬ" ಎಂಬ ಹೆಸರಿನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೊಂತೆಲ್ ತಿಂಗಳ (ಅಕ್ಟೋಬರ್-ನವೆಂಬರ್) ಚತುರ್ದಶಿ, ಅಮಾವಾಸ್ಯೆ ಮತ್ತು ಪಾಡ್ಯದಂದು ಮೂರು ದಿನಗಳ ಕಾಲ ಈ ಹಬ್ಬವನ್ನು ನಂಬಿಕೆ ಹಾಗೂ ಸಂಪ್ರದಾಯದ ಪ್ರಕಾರ ತುಳುವರು ಪಾವಿತ್ರ್ಯದಿಂದ ಆಚರಿಸುತ್ತಾರೆ.

ಮೊದಲನೆಯ ದಿನ, ಚತುರ್ದಶಿಯನ್ನು "ಮೀಪಿನ ಪರ್ಬ" (ಸ್ನಾನ ಮಾಡುವ ಹಬ್ಬ) ಎಂದು ಕರೆಯುತ್ತಾರೆ. ಈ ದಿನದಂದು ಮನೆಯ ಪ್ರತಿಯೊಬ್ಬರೂ ಬೆಳಗ್ಗೆ ಬೇಗನೆ ಎದ್ದು ಎಣ್ಣೆ ಅಭ್ಯಂಜನ ಸ್ನಾನ ಮಾಡುತ್ತಾರೆ. ಬಳಿಕ ಎತ್ತರಕ್ಕೆ ಗೂಡುದೀಪ ಕಟ್ಟುವುದು ದೀಪಾವಳಿ ಸಂಪ್ರದಾಯದ ಹಿರಿಮೆ ಸೂಚಿಸುತ್ತದೆ.

ತುಳು ಜಾನಪದ ತಜ್ಞ ಕೆ.ಕೆ. ಪೇಜಾವರ (ETV Bharat)

ಎರಡನೆಯ ದಿನವಾದ ಅಮಾವಾಸ್ಯೆಯಂದು ವೈದಿಕರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಆದರೆ, ಬ್ರಾಹ್ಮಣೇತರ ವರ್ಗದಲ್ಲಿ ಅಂತಹ ಯಾವುದೇ ಆಚರಣೆ ಕಂಡು ಬರುವುದಿಲ್ಲ. ಅಂದು ವ್ಯಾಪಾರಸ್ಥರು ತಮ್ಮ ಲೆಕ್ಕದ ಪುಸ್ತಕ, ತಕ್ಕಡಿ, ಹಣ ಇಡುವ ಕಪಾಟುಗಳಿಗೆ ಪೂಜೆ ಮಾಡುತ್ತಾರೆ. ಮೂರನೆಯ ದಿನವಾದ ಬಲಿಪಾಡ್ಯಮಿ ತುಳುನಾಡಿನಲ್ಲಿ ಬಲಿಯೇಂದ್ರನಿಗೆ ಮೀಸಲಾಗಿದ್ದು, ಈ ದಿನ ಬಲಿಯೇಂದ್ರ ಪೂಜೆಯನ್ನು ವೈಭವದಿಂದ ಆಚರಿಸುತ್ತಾರೆ. ಕೃಷಿ ಪರಿಕರಗಳನ್ನು ಪೂಜಿಸುವ ಈ ಆಚರಣೆ, ತುಳುನಾಡಿನ ಜನರು ಪ್ರಕೃತಿಯ ಜೊತೆಗೆ ಇರುವುದನ್ನು ತೋರಿಸುತ್ತದೆ.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿರುವ ತುಳು ಜಾನಪದ ತಜ್ಞ ಕೆ.ಕೆ. ಪೇಜಾವರ ಅವರು, "ಬಲಿಯೇಂದ್ರ ಪೂಜೆಯ" ಹಿಂದೆ ಪ್ರಕೃತಿ ಪೂಜೆಯ ಆಶಯವಿದೆ. ಇದು ಕೇವಲ ಹಬ್ಬವಲ್ಲ, ಸಹಜ ಪೂಜೆಯೂ ಹೌದು. ಪ್ರಾರ್ಥನೆಯಲ್ಲಿ 'ಭೂಮಿ, ನಭ' ಎಂಬ ಪ್ರಕೃತಿಯ ಮೌಲ್ಯಗಳನ್ನು ವರ್ಣಿಸುತ್ತೇವೆ. ಬಲಿಯೇಂದ್ರನ ಕಥೆಯು ನಮ್ಮ ಪುರಾಣ ಕಥೆಗಳ ಪ್ರತಿಬಿಂಬ. ಬಲಿಯೇಂದ್ರನು ಭೂಮಿಗೆ ಮತ್ತೆ ಬರುವಂತೆ ಪ್ರಾರ್ಥಿಸುವುದು, ಪ್ರಕೃತಿಯ ಸೌಮ್ಯತೆಯ ಸಂಕೇತವಾಗಿದೆ" ಎಂದಿದ್ದಾರೆ.

ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ (ETV Bharat)

ಬಲಿಪಾಡ್ಯಮಿಯ ದಿನದ ಪೂಜೆ ಮತ್ತು ಆಚರಣೆ:ಮೂರನೆಯ ದಿನವಾದ ಪಾಡ್ಯದಂದು ವಿಶೇಷವಾಗಿ ಬಲೀಂದ್ರ ಪೂಜೆ ಹಾಗೂ ಹಾಗೂ ಗೋಪೂಜೆ ಮಾಡಲಾಗುತ್ತದೆ. ಅಂದು ಮಧ್ಯಾಹ್ನ ತಮ್ಮ ಹಟ್ಟಿಯಲ್ಲಿರುವ ದನ, ಕರು, ಎಮ್ಮೆ, ಕೋಣಗಳನ್ನು ಸ್ನಾನ ಮಾಡಿಸಿ ಅವುಗಳ ಕೊರಳಿಗೆ ಚೆಂಡು ಹೂವಿನ ಮಾಲೆಗಳನ್ನು ಹಾಕಿ ಅಲಂಕರಿಸುತ್ತಾರೆ. ಅದೇ ರೀತಿ ನೊಗ, ನೇಗಿಲು, ಭತ್ತ ಕುಟ್ಟುವ ಒನಕೆ, ಹಾರೆ, ಪಿಕ್ಕಾಸು, ಕತ್ತಿ, ಪರ್ದತ್ತಿ(ಪೈರು ಕೊಯ್ಯುವ ಕತ್ತಿ), ಕಳಸೆ, ಇಸ್‌ಮುಳ್ಳು (ಹಟ್ಟಿಗೊಬ್ಬರ ತೆಗೆಯುವ ಸಾಧನ) ಮುಂತಾದ ಕೃಷಿ ಪರಿಕರಗಳನ್ನು ತೊಳೆದು ಜೋಡಿಸಿಡುತ್ತಾರೆ.

ನಂತರ ಇವುಗಳಿಗೆ ಅಕ್ಕಿಹಿಟ್ಟಿನ ನೀರು ಚಿಮುಕಿಸಿ ಹೂಗಳಿರುವ ವಿವಿಧ ಬಳ್ಳಿಗಳಿಂದ ಮತ್ತು ಚೆಂಡು ಹೂ, ಕಿಸ್ಗಾರ ಹೂ, ಪಾದೆ ಹೂ, ಮಿಠಾಯಿ ಹೂ, ರಥ ಹೂ, ಹಿಂಗಾರದಿಂದ ಅಲಂಕರಿಸಲಾಗುತ್ತದೆ. ಬಳಿಕ ನಾಲ್ಕೈದು ಅಡಿ ಉದ್ದದ ಹಾಲೆ ಮರದ ಕಂಬವೊಂದನ್ನು ಗದ್ದೆಯ ಹುಣಿಯೊಂದರಲ್ಲಿ ವಿಧಿವತ್ತಾಗಿ ನೆಡುತ್ತಾರೆ. ಇದಕ್ಕೆ ಎರಡು ಮೂರು ಕವಲುಗಳಿರುವ ಕಂಬಗಳನ್ನೇ ಆರಿಸುತ್ತಾರೆ. ಆ ಕವಲಿಗೆ ಅಡ್ಡಲಾಗಿ ಕೋಲುಗಳನ್ನು ಕಟ್ಟುತ್ತಾರೆ. ಅದರ ಆಧಾರದಲ್ಲಿ ಹೂವಿನ ಮಾಲೆಗಳಿಂದ ಅಲಂಕಾರ ಮಾಡುತ್ತಾರೆ. ಇದನ್ನು ಬಲೆಕಿ ಮರ ಅಥವಾ ಬಲೀಂದ್ರ ಮರವೆಂದು ಕರೆಯುತ್ತಾರೆ. ಅದರ ತುದಿಗೆ ಬಟ್ಟೆಯೊಂದನ್ನು ದೊಂದಿಯಾಕಾರದಲ್ಲಿ ಕಟ್ಟಿ ಅದನ್ನು ತೆಂಗಿನ ಎಣ್ಣೆಯಿಂದ ಅದ್ದಿ ದೀಪ ಉರಿಯುವಂತೆ ಮಾಡುತ್ತಾರೆ. ಈ ಕಂಬವು ಬಲೀಂದ್ರನನ್ನು ಪ್ರತಿನಿಧಿಸುವ ಸಂಕೇತವಾಗಿದೆ.

ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ (ETV Bharat)

ಸೂರ್ಯಾಸ್ತವಾಗುತ್ತಿದ್ದಂತೆ ಗೋಪೂಜೆಗೆ ಸಿದ್ಧತೆ:ಸೂರ್ಯಾಸ್ತವಾಗುತ್ತಿದ್ದಂತೆ ಗೋಪೂಜೆ, ಬಲೀಂದ್ರ ಪೂಜೆಗಳಿಗೆ ಸಿದ್ಧತೆ ಮಾಡಲಾಗುತ್ತದೆ. ಮನೆಯ ಅಂಗಳ, ಕಿಟಕಿ-ಬಾಗಿಲುಗಳ ಮುಂದೆ, ಹೊಸ್ತಿಲು, ನಡುಮನೆ, ಒಳಮನೆ, ಹೊರಗಿನ ಹಜಾರ, ಹಟ್ಟಿ, ಗೊಬ್ಬರದ ರಾಶಿ, ಬೈಹುಲ್ಲಿನ ತುಪ್ಪೆಗಳಿಗೆ ಸಣ್ಣಸಣ್ಣ ಮಣ್ಣಿನ ಹಣತೆಗಳನ್ನು ಇಟ್ಟು ದೀಪ ಬೆಳಗಿಸಲಾಗುತ್ತದೆ. ಇದು ಸಾಂಕೇತಿಕವಾಗಿ ಬಲೀಂದ್ರನನ್ನು ಸ್ವಾಗತಿಸುವ ಸಂಭ್ರಮವೂ ಹೌದು. ನಂತರ ಒಂದು ಗೆರಸೆ(ತಡ್ಪೆ)ಯಲ್ಲಿ ಮೂರು ಸಾಲಿನಲ್ಲಿ ಅಕ್ಕಿ, ಭತ್ತ ಮತ್ತು ಅವಲಕ್ಕಿಯಿಡುತ್ತಾರೆ. ಬಳಿಕ ತೆಂಗಿನಕಾಯಿಯನ್ನು ಎರಡು ಹೋಳು ಮಾಡಿ ಇಟ್ಟು, ದೀಪ ಬೆಳಗಿಸಿ ದನಗಳಿಗೆ ಆರತಿ ಮಾಡುತ್ತಾರೆ.

ಈ ಸಂದರ್ಭ ಗೋವುಗಳಿಗೆ ತಿನ್ನಲು ಚಪ್ಪೆಗಟ್ಟಿ(ಸಪ್ಪೆ ಕಡುಬ)ಯನ್ನು ಕೊಡಲಾಗುತ್ತದೆ. ಬಳಿಕ ದೀಪ ಬೆಳಗುತ್ತಿರುವ ಗೆರಸೆಯನ್ನು ಬಲೀಂದ್ರನ ಸಂಕೇತವಾಗಿ ನೆಟ್ಟಿರುವ ಕಂಬದ ಬುಡದಲ್ಲಿ ಶುದ್ಧವಾಗಿ ತೊಳೆದಿರಿಸಿದ ಮಣೆಯ ಮೇಲಿಟ್ಟು ಆರತಿ ಮಾಡಿ, ಬಲಿಚಕ್ರವರ್ತಿಯ ಕಥೆಯನ್ನು ಸಾರುವ ಕಥೆಯನ್ನು ಪಾಡ್ದನ ಅಥವಾ ಗಾಯನವನ್ನು ಹಾಡುತ್ತಾರೆ. ಇದನ್ನು 'ಬಲಿಯೇಂದ್ರ ಲೆಪ್ಪುನು' (ಬಲಿಯೇಂದ್ರ ಕರೆಯುವುದು) ಎಂದು ಹೇಳುತ್ತಾರೆ.

ಬಲಿಯೇಂದ್ರನನ್ನು ವಿಶಿಷ್ಟವಾಗಿ ಕರೆಯಲಾಗುತ್ತದೆ: ಉದಾ: ಕರ್ಗಲ್‌ಲ್ ಕಾಯ್ಪೋನಗ, ಬೊಲ್‌ಕಲ್‌ಲ್ ಪೂ ಪೋನಗ, ಉಪ್ಪು ಕರ್ಪೂರ ಆನಗ, ಜಾಲ್ ಪಾದೆ ಆನಗ, ಉರ್ದು ಮದ್ದೋಲಿ ಆನಗ, ಗೊಡ್ಡೆರ್ಮೆ ಗೋಣೆ ಆನಗ, ಎರು ದಡ್ಡೆ ಆನಗ, ನೆಕ್ಕಿದಡಿಟ್ ಆಟ ಆನಗ, ತುಂಬೆದಡಿಟ್ ಕೂಟ ಆನಗ, ದೆಂಬೆಲ್‌ಗ್ ಪಾಂಪು ಪಾಡ್‌ನಗ, ಅಲೆಟ್ಟ್ ಬೊಲ್ನೆಯಿ ಮುರ್ಕುನಗ, ದಂಟದಜ್ಜಿ ಮದ್ಮಲಾನಗ, ಗುರ್ಗುಂಜಿದ ಕಲೆ ಮಾಜಿನಗ ಒರಬತ್ತ್ ಪೋ... ಬಲಿಯೇಂದ್ರ... ಕೂ... ಕೂ... ಕೂ... ಎಂದು ಅಕ್ಕಿ ಹಾರಿಸಿ ಕರೆಯುತ್ತಾರೆ.

ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ (ETV Bharat)

(ಕಗ್ಗಲ್ಲು ಕಾಯಿಕೊಡುವಾಗ, ಬೆಳ್ಗಲ್ಲು ಹೂಬಿಡುವಾಗ, ಉಪ್ಪುಕರ್ಪೂರ ಆಗುವಾಗ, ಅಂಗಳ ಬಂಡೆಹಾಸು ಆಗುವಾಗ, ಉದ್ದು ಮದ್ದಳೆ ಆಗುವಾಗ, ಗೊಡ್ಡೆಮ್ಮೆ ಕೋಣ ಆಗುವಾಗ, ಎತ್ತು ಮಂಗ ಆಗುವಾಗ, ನೆಕ್ಕಿ ಗಿಡದಡಿ ಯಕ್ಷಗಾನ ಆಗುವಾಗ, ತುಂಬೆ ಗಿಡದಡಿ ಕೂಟ ಆಗುವಾಗ, ಹೊಲದ ಬಿರುಕಿಗೆ ಕಾಲು ಸೇತುವೆ ಆಗುವಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ, ದಂಟೆಯಜ್ಜಿ ಮೈನೆರೆದಾಗ, ಗುರುಗುಂಜಿಯ ಕಲೆ ಮಾಸುವಾಗ ನಿನ್ನ ಊರು, ನಿನ್ನ ಸೀಮೆ ಆಳಿಕೊಂಡು ಬಾ... ಬಲೀಂದ್ರ... ಕೂ... ಕೂ... ಕೂ... ಎಂದು ಬಲೀಯೆಂದ್ರನನ್ನು ಕರೆಯುತ್ತಾರೆ.) ಇಲ್ಲಿಗೆ ಗೋಪೂಜೆ, ಬಲಿಯೇಂದ್ರ ಪೂಜೆ ಮುಗಿಯುತ್ತದೆ.

ದೀಪಾವಳಿಯ ಮೂರು ದಿನವೂ ಸಂಜೆಯಾಗುತ್ತಿದ್ದಂತೆ ಮನೆಯ ಹೊಸ್ತಿಲು, ಹಜಾರ, ಜಗುಲಿ, ಬಾವಿಕಟ್ಟೆ, ತುಲಸಿಕಟ್ಟೆಗಳಿಗೆ ಸಾಲಾಗಿ ದೀಪಗಳನ್ನು ಉರಿಸಲಾಗುತ್ತದೆ. ರಾತ್ರಿ ವೇಳೆ ಎಲ್ಲರ ಮನೆಗಳಲ್ಲೂ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಒಟ್ಟಿನಲ್ಲಿ ಮೂರು ದಿನಗಳ ದೀಪಾವಳಿ ಹಬ್ಬಕ್ಕೆ ಕರಾವಳಿಯಲ್ಲಿ ಸಂಭ್ರಮ ಮನೆಮಾಡುತ್ತದೆ.

ದೀಪಾವಳಿ ಹಬ್ಬದ ಮೂರು ದಿನಗಳ ಉತ್ಸವವು ತುಳುನಾಡಿನಲ್ಲಿ ಸಂಭ್ರಮದಿಂದ ನಡೆಯುತ್ತದೆ.

ಇದನ್ನೂ ಓದಿ:ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ: ಕನ್ನಡ ಕಲಿತು ನಾಡ ಗೀತೆ ಹಾಡುವ ಮಕ್ಕಳಿಗೆ ಬೇಕಿದೆ ನೆರವು

ಇದನ್ನೂ ಓದಿ:ದೇಶದ ಜನತೆ ಬೆಳಕಿನ ಹಬ್ಬ ದೀಪಾವಳಿ ಶುಭಾಶಯ ಕೋರಿದ ರಾಷ್ಟ್ರಪತಿ, ಪ್ರಧಾನಿ

ABOUT THE AUTHOR

...view details