ಮೈಸೂರು:ಮೆದುಳು ನಿಷ್ಕ್ರೀಯಗೊಂಡು ಮೃತಪಟ್ಟ ವ್ಯಕ್ತಿಯೋರ್ವರ ಅಂಗಾಂಗಗಳನ್ನು 4 ಜನರಿಗೆ ದಾನ ಮಾಡುವ ಮೂಲಕ ಮೈಸೂರಿನ ಕುಟುಂಬವೊಂದು ಸಾವಿನಲ್ಲೂ ಸಾರ್ಥಕತೆ ಮೆರೆದಿದೆ.
ಸಿ.ಆರ್.ಚಂದ್ರ (39) ಎಂಬವರನ್ನು ಜುಲೈ 19ರಂದು ಅಪೋಲೊ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಲ್ಲಿ ಇವರ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜುಲೈ 22ರಂದು ಬೆಳಿಗ್ಗೆ 6.35ಗೆ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು.
ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಅಂಗಾಂಗ ದಾನಕ್ಕೆ ಯೋಗ್ಯರಾಗಿರುವುದು ಕಂಡುಬಂದಿದೆ. ಹೀಗಾಗಿ, 1994ರ ಮಾನವ ಅಂಗಾಂಗ ಕಸಿ ಕಾಯಿದೆ ಅನುಸಾರ, ಆಸ್ಪತ್ರೆಯ ಶಿಷ್ಟಾಚಾರದಂತೆ ವೈದ್ಯರು ಈ ವಿಚಾರವನ್ನು ಕುಟುಂಬದವರಿಗೆ ತಿಳಿಸಿ ಒಪ್ಪಿಗೆ ಪಡೆದರು.
ಮಂಗಳವಾರ ರಾತ್ರಿ 9.55ಕ್ಕೆ ಕ್ರಾಸ್-ಕ್ಲಾಂಪ್ ಮೂಲಕ, ಚಂದ್ರ ಅವರ ಯಕೃತ್ತು, ಮೂತ್ರಪಿಂಡ ಮತ್ತು ಕಾರ್ನಿಯಾವನ್ನು ಹೊರತೆಗೆದು ನಾಲ್ವರು ರೋಗಿಗಳಿಗೆ ದಾನ ಮಾಡಲಾಗಿದೆ. ಮನೆ ಸದಸ್ಯನನ್ನು ಕಳೆದುಕೊಂಡ ದುಖಃದಲ್ಲಿಯೂ ಈ ಕಾರ್ಯವನ್ನು ಮಾಡಿರುವ ಚಂದ್ರ ಅವರ ಕುಟುಂಬಕ್ಕೆ ಆಸ್ಪತ್ರೆ ಕೃತಜ್ಞತೆ ಸಲ್ಲಿಸಿದೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಬದಿ ಅನಾಥವಾಗಿದ್ದ ತಮಿಳುನಾಡಿನ ಯುವಕ: ತಾಯಿ ಮಡಿಲು ಸೇರಿಸಲು ಪತ್ರಕರ್ತರ ಶ್ರಮ - Journalist Helps Tamil Nadu Youth