ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಸಂಬಂಧ ಚರ್ಚೆ ವೇಳೆ ದಲಿತ ಪದ ಬಳಕೆ ಕುರಿತು ಆಕ್ಷೇಪ ವ್ಯಕ್ತವಾಯಿತು. ವಿಧಾನಸಭೆಯಲ್ಲಿ ಕೈ ಶಾಸಕ ನರೇಂದ್ರ ಸ್ವಾಮಿ ದಲಿತ ಪದ ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದಲಿತ ಪದ ಬಳಕೆ ನಮಗೆ ನೋವು ತಂದಿದೆ. ದಲಿತ ದಲಿತ ಅಂತ ಅವಮಾನ ಮಾಡ್ತೀರಾ?. ದಲಿತ ಪದ ಬದಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂತ ಬಳಸಿ ಎಂದು ಆಗ್ರಹಿಸಿದರು.
ಈ ವೇಳೆ ನರೇಂದ್ರಸ್ವಾಮಿಗೆ ಸಚಿವ ಪರಮೇಶ್ವರ್ ಬೆಂಬಲ ವ್ಯಕ್ತಪಡಿಸಿದರು. ಸಂವಿಧಾನದಲ್ಲೇ ಪರಿಶಿಷ್ಟ ಜಾತಿ, ಪಂಗಡ ಪದ ಇದೆ. ಇದನ್ನು ಬಳಕೆ ಮಾಡಿ. ದಲಿತ ಎಂಬ ಶಬ್ದಕ್ಕೆ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ನೀವು ಏಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪದ ಬಳಸಬಾರದು?. ಇನ್ನು ಮುಂದೆ ಪರಿಶಿಷ್ಟ ಜಾತಿ ಎಂದು ಪದ ಬಳಸಿ ಎಂದು ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪರಮೇಶ್ವರ್ ಹೇಳಿಕೆಗೆ ಸ್ವಾಗತ, ಇನ್ಮುಂದೆ ಅದೇ ಪದ ಬಳಸ್ತೇವೆ. ಅದೇ ರೀತಿ ದಲಿತ ಸಂಘರ್ಷ ಸಮಿತಿ, ದಲಿತ ಹಿಂದುಳಿದ ಅಲ್ಪಸಂಖ್ಯಾತ ಅಂತ ಬಳಸ್ತಾರೆ, ಇದನ್ನೂ ಬ್ಯಾನ್ ಮಾಡಿ ಎಂದು ಆಗ್ರಹಿಸಿದರು.
ಎಲ್ಲಾ ನಿಗಮಗಳಲ್ಲಾಗಿರುವ ಅಕ್ರಮದ ಬಗ್ಗೆ ತನಿಖೆ ಮಾಡಿ:ಈ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಜೊತೆಗೆ ಎಲ್ಲ ನಿಗಮಗಳಲ್ಲೂ ಆಗಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸಬೇಕು. ಹಿಂದಿನ ಅವಧಿಗಳಲ್ಲಿ ನಡೆದ ಅಕ್ರಮದ ತನಿಖೆಯನ್ನೂ ನಡೆಸಬೇಕು. ತನಿಖೆ ನಡೆಸುವ ಧೈರ್ಯ ಸಿದ್ದರಾಮಯ್ಯ ಒಬ್ಬರಿಗೇ ಇರೋದು ಎಂದು ನರೇಂದ್ರ ಸ್ವಾಮಿ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯವನ್ನು ಜಾತಿ ಹೆಸರಲ್ಲಿ ಒಡೆದಿರುವುದು ಇದಕ್ಕೆ ಕಾರಣವಾಗಿದೆ. ಯಾವ ನಿಗಮಗಳಿಗೆ ಹಣ ಹೋಗಿದೆ ಎಂದು ಇಲಾಖೆಗೆ ಗೊತ್ತಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸರ್ಕಾರದ ಹಣ ಹೋಗಿಲ್ಲ. ಬೋವಿ ನಿಗಮದ ಅಕ್ರಮ ವರ್ಗಾವಣೆಯನ್ನು ಸರಿಯಾಗಿ ನಿಭಾಯಿಸಿದ್ದರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ನಡೆಯುತ್ತಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಅಕ್ರಮ ಜಾಸ್ತಿಯಾಗಿದೆ. ಹೀಗಾಗಿ ಲಂಗುಲಗಾಮಿಲ್ಲದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ನಡೆದಿದೆ. ಇದಕ್ಕಿಂತ ಹೆಚ್ಚಿಗೆ ಬೋವಿ ಅಭಿವೃದ್ಧಿ ನಿಗಮದಲ್ಲಿ, ತಾಂಡಾ ಅಭಿವೃದ್ಧಿ ನಿಗಮದಲ್ಲಿ ಅಕ್ರಮವಾಗಿದೆ. ಅವರು ಎಸ್ಸಿ, ಎಸ್ಟಿ ಯಲ್ಲವಾ? ಎಂದು ಪ್ರಶ್ನಿಸಿದರು.
ನಮ್ಮ ಬೆನ್ನು ನಮಗೆ ಕಾಣಿಸಲ್ಲ. ಈ ಹಿಂದೆ ನಡೆದ ತಪ್ಪನ್ನು ನಾವು ನೋಡಬೇಕು. ಸಿಎಂ ಅವರು ಈ ವಿಚಾರವನ್ನು ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಮಾತ್ರ ಸೀಮಿತ ಮಾಡದೆ ಇತರ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ವಿಸ್ತರಿಸಿ. ಅಲ್ಲಿನ ಆರ್ಥಿಕ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ಮಾಡಬೇಕು. 2023ರಲ್ಲಿ ಗೂಳಿಹಟ್ಟಿಯವರು ಅಂದಿನ ಸಿಎಂಗೆ ಪತ್ರ ಬರೆದು ಬೋವಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಹಗರಣವಾಗಿದೆ ಎಂದು ಬರೆದಿದ್ದರು. ಇದನ್ನು ತನಿಖೆ ಮಾಡಲು ಮನವಿ ಮಾಡಿದ್ದರು.
ಈ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ. ಎರಡು ಸದಸ್ಯರ ಮನೆಗೆ ಹಣ ಹೋಗಿದೆ. ಸಾಯಿ ಥೆರಪಿಸ್ಟ್ ಎಂಬ ಕಂಪನಿ ಸೃಷ್ಟಿಸಿ ಹಣ ವರ್ಗಾಯಿಸುಲಾಗುತ್ತೆ. ಆವತ್ತೇ ಕುಣಿಕೆ ಹಾಕಿದ್ದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ನಡೆಯುತ್ತಿರಲಿಲ್ಲ. ಈಗ ಯಾರ ತಟ್ಟೆಯಲ್ಲಿ ನೊಣ ಇದೆ ಎಂದು ಹೇಳುವುದು?. ಯಾವುದೇ ನಿಗಮವಾಗಲಿ, ಯಾವುದೇ ಅವಧಿಯಲ್ಲಾಗಲಿ ವಿವಿಧ ನಿಗಮಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟರಿಗೆ ರಾಜಯೋಗ, ಪ್ರಾಮಾಣಿಕರಿಗೆ ಆತ್ಮಹತ್ಯೆಗೆ ಭಾಗ್ಯ: ಸಿ.ಟಿ.ರವಿ - Valmiki Corporation Scam