ಬೆಂಗಳೂರು: ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುವ ಮೂಲಕ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಖ್ಯಾತ ಚಾದರ್ ಗ್ಯಾಂಗ್‌ನ 8 ಜನ ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇಮ್ತಿಯಾಜ್ ಆಲಂ, ಜಾವೇದ್ ಆಲಂ, ಪವನ್ ಶಾ, ಮುನೀಲ್ ಕುಮಾರ್, ರಿಜ್ವಾನ್ ದೇವನ್, ಸಲೀಂ ಆಲಂ, ರಾಮೇಶ್ವರ ಗಿರಿ ಹಾಗೂ ಸೂರಜ್ ಕುಮಾರ್ ಬಂಧಿತರು.
ಕಳ್ಳತನ ಮಾಡುತ್ತಿದ್ದುದು ಹೇಗೆ?ಬೆಡ್ಶೀಟ್ ಹೊದ್ದು ರಾತ್ರಿ ವೇಳೆ ಸುತ್ತಾಡುತ್ತಿದ್ದ ಆರೋಪಿಗಳು, ನಸುಕಿನಜಾವ 3-4 ಗಂಟೆ ಸಮಯಕ್ಕೆ ಮೊಬೈಲ್ ಅಂಗಡಿಗಳ ಬಳಿ ಹೋಗುತ್ತಿದ್ದರು. ಆರೋಪಿಗಳಲ್ಲಿ ಕೆಲವರು ಅಂಗಡಿ ಮುಂದಿರುವ ಸಿಸಿಟಿವಿ ಕ್ಯಾಮರಾಗಳಿಗೆ ಬೆಡ್ಶೀಟ್ ಅಡ್ಡ ಹಿಡಿದುಕೊಳ್ಳುತ್ತಿದ್ದರು. ಅದೇ ಸಂದರ್ಭದಲ್ಲಿ ಉಳಿದವರು ಅಂಗಡಿ ಶಟರ್ ಮುರಿದು ಅಂಗಡಿಯೊಳಗೆ ನುಗ್ಗುತ್ತಿದ್ದರು. ನಂತರ ಅಂಗಡಿಯೊಳಗಿರುವ ದುಬಾರಿ ಬೆಲೆಯ ಮೊಬೈಲ್ ಫೋನ್‌ಗಳನ್ನು ಕದ್ದು ಸಿಗ್ನಲ್ ಕೊಡುತ್ತಿದ್ದರು. ಪುನಃ ಸಿಸಿಟಿವಿ ಕ್ಯಾಮರಾಗಳಿಗೆ ಬೆಡ್ಶೀಟ್ ಅಡ್ಡಲಾಗಿ ಹಿಡಿದುಕೊಂಡು ಹೊರಬರುತ್ತಿದ್ದರು. ನಂತರ ಬೆಡ್ಶೀಟ್ ಮುಖಕ್ಕೆ ಸುತ್ತಿಕೊಂಡು ಪರಾರಿಯಾಗುತ್ತಿದ್ದರು. ನಂತರ ನಗರದಲ್ಲಿ ಕೂಲಿ ಕೆಲಸಕ್ಕಾಗಿ ಬಂದ ಕಾರ್ಮಿಕರ ಜತೆ ಸೇರಿಕೊಂಡು ಪೊಲೀಸರ ಕಣ್ತಪ್ಪಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.