ಬೆಂಗಳೂರು : ನನಗೆ ಒಂದೇ ಒಂದು ವಿಷಯ ಬಹಳ ದುಃಖ ತಂದಿದೆ. ವಿಡಿಯೋ ನೋಡುವುದಕ್ಕೆ ನಾನು ಧೈರ್ಯ ಮಾಡಿಲ್ಲ. ಈ ವಿಷಯ ನಮ್ಮ ಸುತ್ತಮುತ್ತಲಿನ ಜನ ಫೋನ್ ಮಾಡಿ ಹೇಳಿದರು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಅಜ್ಜನ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ರೀತಿಯ ವಿಡಿಯೋಗಳು ಇದ್ದಾಗ ಬ್ಲರ್ ಮಾಡಬೇಕಿತ್ತು. ಹೆಣ್ಣು ಮಕ್ಕಳ ಮುಖ ಕಾಣುವ ರೀತಿಯಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದು ಸರಿಯಲ್ಲ. ಅದು ಸಹ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ದೇವೇಗೌಡರನ್ನು ಮುಗಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಇಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ದೇವೇಗೌಡರು ಹಾಗೂ ಕುಮಾರಣ್ಣರನ್ನು ಎಳೆದು ತರುವುದು ಸರಿಯಲ್ಲ. ಯಾರು ಆರೋಪಿ ಸ್ಥಾನದಲ್ಲಿ ಇದ್ದಾರೆ. ನಾನು ಹೇಳೋದು ಇಷ್ಟೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ತಪ್ಪು ಮಾಡಿದ ಮೇಲೆ ತಲೆ ಬಾಗಲೇಬೇಕು. ಅಂತಿಮವಾಗಿ ಎಸ್‌ಐಟಿ ವರದಿ ಬಂದ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಮಾತನಾಡೋಣ ಎಂದು ತಿಳಿಸಿದರು.
''ಈ ಪ್ರಕರಣವನ್ನು ರಾಜಕೀಯವಾಗಿ ತಪ್ಪು ದಾರಿಗೆ ಎಳೆಯಲಾಗುತ್ತಿದ್ದು, ರಾಜ್ಯದ ಜನಕ್ಕೆ ತಪ್ಪು ಸಂದೇಶ ಕೊಡುವ ಕೆಲಸ ಆಗುತ್ತಿದೆ. ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಬದುಕು ರಾಜ್ಯದ ಜನರಿಗೆ ಗೊತ್ತಿದೆ. ಅದರಲ್ಲೂ ವಿಶೇಷವಾಗಿ ದೇವೇಗೌಡರ ವೈಯಕ್ತಿಕ ಬದುಕು ತೆರೆದ ಪುಸ್ತಕ. ಅವರಾಗಲಿ, ನಮ್ಮಜ್ಜಿ ಚೆನ್ನಮ್ಮ ಆಗಲಿ ನಮ್ಮಂತ ಯುವಕರಿಗೆ ಸ್ಫೂರ್ತಿ. ದೇವೇಗೌಡರಿಗೆ ಈಗ 91 ವರ್ಷ ವಯಸ್ಸು, ಸಹಜವಾಗೇ ಈ ಎಲ್ಲ ವಿಷಯಗಳನ್ನು ಕೇಳಿ ಅವರ ಮನಸ್ಸಿಗೆ ಎಷ್ಟರ ಮಟ್ಟಿಗೆ ಆಘಾತ ಆಗಿರುತ್ತದೆ ಎಂಬುದನ್ನು ಊಹಿಸುವುದಕ್ಕೂ ಆಗಲ್ಲ. ಅವರು ಸಾಕಷ್ಟು ನೊಂದಿದ್ದಾರೆ. ತಾತ, ಅಜ್ಜಿ ಸಾಕಷ್ಟು ನೋವಿನಲ್ಲಿದ್ದಾರೆ. ಅದು ರಾಜ್ಯದ ಜನತೆಗೆ ಗೊತ್ತು'' ಎಂದು ಹೇಳಿದರು.