ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆಗೆ ಎನ್ಐಎ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಅಂತೆಯೇ ಆರೋಪಿಯ ಸುಳಿವು ಕೊಟ್ಟವರಿಗೆ 10 ಲಕ್ಷ ರೂ ಬಹುಮಾನ ನೀಡುವುದಾಗಿ ಈಗಾಗಲೇ ಘೋಷಿಸಿದೆ. ಸಾರ್ವಜನಿಕರಿಗೆ ಆರೋಪಿಯ ಗುರುತು ಗೊತ್ತಾಗಲಿ ಎಂದು ಆತನ ಮತ್ತೆರಡು ವಿಡಿಯೋಗಳನ್ನು ಎನ್ಐಎ ಬಿಡುಗಡೆಗೊಳಿಸಿದೆ.
ಬಿಎಂಟಿಸಿ ಬಸ್ನಲ್ಲಿ ಸಂಚರಿಸಿರುವ ಮತ್ತು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಶಂಕಿತ ಆರೋಪಿ ಅಡ್ಡಾಡಿರುವ ವಿಡಿಯೋವನ್ನು ಬಿಡುಗಡೆ ಮಾಡಿ, ಪತ್ತೆಗೆ ಸಹಕರಿಸುವಂತೆ ಎನ್ಐಎ ತಿಳಿಸಿದೆ. ಶಂಕಿತನ ಮಾಹಿತಿ ಗೊತ್ತಾದರೆ 08029510900, 8904241100 ನಂಬರ್ಗೆ ಕರೆ ಮಾಡಿ ಅಥವಾ info.blr.nia@gov.in ಗೆ ಇಮೇಲ್ ಮಾಡಿ. ಸುಳಿವು ಕೊಟ್ಟವರ ಮಾಹಿತಿ ಗೌಪ್ಯವಾಗಿ ಇಡುವುದಾಗಿ ಎನ್ಐಎ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಎನ್ಐಎ ಬಿಡುಗಡೆ ಮಾಡಿದ ವಿಡಿಯೋಗಳು: ಮೊದಲ ವಿಡಿಯೋ ಶಂಕಿತ ಆರೋಪಿ ಬಿಎಂಟಿಸಿ ಬಸ್ನಲ್ಲಿ ಸಂಚರಿಸುವುದಿದೆ. ಈ ವಿಡಿಯೋದಲ್ಲಿನ ಸಮಯದ ಪ್ರಕಾರ ಆರೋಪಿ ಮಾರ್ಚ್ 1 ಮಧ್ಯಾಹ್ನ 3.06ರ ಸುಮಾರಿಗೆ ಬಸ್ನಲ್ಲಿ ಕ್ಯಾಪ್, ಮಾಸ್ಕ್ ಧರಿಸಿ ಸಂಚರಿಸಿದ್ದಾನೆ. ಮೊದಲು ಮಧ್ಯದ ಸೀಟಿನಲ್ಲಿ ಕುಳಿತಿದ್ದು, ಬಳಿಕ ಕೊನೆಯ ಸೀಟಿನಲ್ಲಿ ಕುಳಿತುಕೊಂಡಿರುವುದು ವಿಡಿಯೋದಲ್ಲಿದೆ. ಕೆಫೆಯಲ್ಲಿ ಸ್ಫೋಟವಾದ ಬಳಿಕ ಆರೋಪಿ ಸಂಚರಿಸಿರುವ ವಿಡಿಯೋ ಇದು.