ಚಿಕ್ಕಮಗಳೂರು:ರಸ್ತೆ ಇಲ್ಲದೇ ರೋಗಗ್ರಸ್ಥೆ ವೃದ್ಧೆಯನ್ನು 3 ಕಿ.ಮೀ ಹೊತ್ತುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.
ನೆಲ್ಲಿಬೀಡು ಗ್ರಾಮದ 70 ವರ್ಷದ ವೃದ್ಧೆ ಲಕ್ಷ್ಮಿ ಎಂಬುವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲು ಮಾರ್ಗವಿಲ್ಲದೇ ಹಳ್ಳಿಗರು ಆಕೆಯನ್ನು 3 ಕಿ.ಮೀ ಹೊತ್ತುಕೊಂಡು ಬಂದು ಮುಖ್ಯರಸ್ತೆಯಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳಸ ತಾಲೂಕಿನ ನೆಲ್ಲಿಬೀಡು, ಅಜ್ಜಿಗದ್ದೆ, ಆರೋಳ್ಳಿ ಕಟ್ಟೆಮನೆ, ಕೋಣೆಮನೆ, ಚಿಕ್ಕನಾಡಮನೆ, ಚೌಡಿಬೀಳಲು, ದೀಟೆ, ಕಬ್ಬಂಚಿ, ಕರ್ಕೆತೋಟ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ರಸ್ತೆ ಇಲ್ಲದೇ ಭದ್ರಾ ನದಿಗೆ ನಿರ್ಮಿಸಿರುವ ತೂಗು ಸೇತುವೆ ಮೇಲೆ ಬದುಕು ಕಟ್ಟಿಕೊಂಡಿದ್ದಾರೆ.
ರಸ್ತೆಯಿಲ್ಲದೆ ಹೆಗಲ ಮೇಲೆ 70 ವರ್ಷದ ಅಜ್ಜಿಯನ್ನು 3 ಕಿಮೀ ದೂರ ಹೊತ್ತು ಸಾಗಿದ ಗ್ರಾಮಸ್ಥರು (ETV Bharat) ಬೇಸಿಗೆಗಾಲದಲ್ಲಿ ಭದ್ರಾ ನದಿಯ ನೀರು ಕಡಿಮೆ ಇದ್ದು ನದಿ ಒಳಗಡೆಯೇ ವಾಹನಗಳು ಓಡಾಡುತ್ತವೆ. ಆದರೆ, ಮಳೆಗಾಲದಲ್ಲಿ ಭದ್ರೆಯ ನೀರು ಹೆಚ್ಚಾಗಿರುವುದರಿಂದ ತೂಗು ಸೇತುವೆ ಮೇಲೆಯೇ ಸಾಗಬೇಕು. ಮುಖ್ಯರಸ್ತೆಯಿಂದ ಆರು ಕಿ.ಮೀ. ದೂರದ ಹಳ್ಳಿಗಳ ಜನ ಕೂಡ ನಡೆದೇ ಸಾಗಬೇಕು. ಪ್ರತಿಯೊಂದಕ್ಕೂ 6 ಕಿ.ಮೀ. ನಡೆಯದ ಹೊರತು ಬದುಕಿಲ್ಲ.
ಭದ್ರಾ ನದಿಗೆ ಮುಳುಗು ಸೇತುವೆ ನಿರ್ಮಿಸಿ ಕೊಡಿ ಎಂದು ಐದಾರು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಸ್ಥಳಕ್ಕೆ ಹೋಗಿ ಬರುವ ಅಧಿಕಾರಿಗಳು, ಜನನಾಯಕರು ಮತ್ತೆ ಅತ್ತ ತಲೆ ಹಾಕುವುದಿಲ್ಲ ಎಂದು ಹಳ್ಳಿಗರು ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ನಗರಕ್ಕೆ ಕೇಳದ ಗುಡ್ಡಳ್ಳಿ ಜನರ ಗೋಳು, ಜೋಲಿಯೇ ಆಂಬ್ಯುಲೆನ್ಸ್: ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ - No Road For Village