ಕರ್ನಾಟಕ

karnataka

ETV Bharat / state

ಕೆಸರೆ ಗ್ರಾಮದ ಜಮೀನಿಗೆ ಮೈಸೂರು ನಗರದಲ್ಲಿ ಬದಲಿ ನಿವೇಶನ ನೀಡಿರುವ ಬಗ್ಗೆ ತನಿಖೆ ಅಗತ್ಯ: ಹೈಕೋರ್ಟ್ - MUDA Scam - MUDA SCAM

ಮುಡಾ ಪ್ರಕರಣದಲ್ಲಿ 15 ಕಿ.ಮೀ ದೂರದ ಕೆಸರೆ ಗ್ರಾಮದ ಜಮೀನಿಗೆ ಮೈಸೂರು ನಗರದಲ್ಲಿ ಬದಲಿ ನಿವೇಶನ ನೀಡಿರುವ ಬಗ್ಗೆ ತನಿಖೆ ಅಗತ್ಯವಿದೆ. ಹಾಗೆಯೇ, ಕಾನೂನುಬಾಹಿರ ನಿರ್ಣಯದ ಆಧಾರದ ಮೇಲೆ ನೀಡಲಾಗಿರುವ 14 ಸೈಟ್‌ಗಳಿಗೆ ಏನಾಗಿದೆ ಎಂಬುದೂ ತನಿಖೆಯಾಗಲಿ ಎಂದು ಹೈಕೋರ್ಟ್ ಹೇಳಿದೆ.

muda scam
ಹೈಕೋರ್ಟ್, ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Sep 25, 2024, 6:36 AM IST

ಬೆಂಗಳೂರು:''ಮೈಸೂರು ನಗರದಿಂದ 15 ಕಿಲೋ ಮೀಟರ್ ದೂರದ ಕೆಸರೆ ಗ್ರಾಮದಲ್ಲಿ ಜಮೀನಿಗೆ ಬದಲಾಗಿ, ಮೈಸೂರು ನಗರದ ಹೃದಯಭಾಗದಲ್ಲಿರುವ ವಿಜಯನಗರ ಮೂರನೇ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿಗೆ ನಿವೇಶನ ಹಂಚಲಾಗಿದ್ದು, ಈ ಸಂಬಂಧ ತನಿಖೆ ನಡೆಯಬೇಕಿದೆ'' ಎಂದು ಹೈಕೋರ್ಟ್ ತಿಳಿಸಿದೆ.

ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

''ಮುಖ್ಯಮಂತ್ರಿಗಳ ಪತ್ನಿಗೆ ಪರ್ಯಾಯ ನಿವೇಶನ ನೀಡಬೇಕಾದಲ್ಲಿ ಕೆಸರೆಯಲ್ಲೇ ಅಥವಾ ಆ ಬಳಿಕ ನಿರ್ಮಾಣಗೊಂಡ ಯಾವುದಾದರೂ ಬಡಾವಣೆಯಲ್ಲಿ ನೀಡಬಹುದಾಗಿತ್ತು. ಇದಕ್ಕೆ ಬದಲಾಗಿ 1991ರಲ್ಲಿ ನಿರ್ಮಾಣವಾದ ವಿಜಯನಗರದ ಮೂರನೇ ಹಂತದಲ್ಲಿ ನೀಡುವುದಲ್ಲ'' ಎಂದು ಪೀಠ ಹೇಳಿದೆ.

ಇದಲ್ಲದೆ ಇನ್ನಾವ ಪ್ರಕರಣದ ತನಿಖೆ?- ಕೋರ್ಟ್: ''ಈ ಪ್ರಕರಣದಲ್ಲಿ ಫಲಾನುಭವಿಗಳು ಅರ್ಜಿದಾರರಿಗೆ ಅಪರಿಚಿತರಲ್ಲ, ಮುಖ್ಯಮಂತ್ರಿಗಳ ಕುಟುಂಬವೇ ಲಾಭ ಪಡೆದಿದೆ. ಒಂದು ವೇಳೆ ಈ ಪ್ರಕರಣಕ್ಕೆ ತನಿಖೆ ಬೇಡವೆಂದರೆ, ಇನ್ನು ಯಾವ ಪ್ರಕರಣದ ಬಗ್ಗೆ ತನಿಖೆ ನಡೆಸಬಹುದು?'' ಎಂದು ಪೀಠ ಹೇಳಿದೆ.

ಯತೀಂದ್ರ ಮೌನವಾಗಿದ್ದರು ಎಂಬ ವಾದ ಹಾಸ್ಯಾಸ್ಪದ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪತ್ನಿ 50:50 ಅನುಪಾತದಲ್ಲಿ ಪರಿಹಾರ ಅಥವಾ ಪರಿಹಾರ ನಿವೇಶನ ನೀಡುವಂತೆ ಮುಡಾಕ್ಕೆ ಅರ್ಜಿ ಸಲ್ಲಿಸುತ್ತಾರೆ. ಈ ಮಾದರಿಯಲ್ಲಿ ಪರಿಹಾರ ಪ್ರಕಟಿಸುವಾಗಲೂ ನಿಯಮಗಳ ಉಲ್ಲಂಘನೆಯಾಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡುವ ಬಗ್ಗೆ ನಡೆದ ಮುಡಾ ಸಭೆಯಲ್ಲಿ ದೂರುದಾರರ ಮಗ (ಡಾ.ಯತೀಂದ್ರ) ಭಾಗಿಯಾಗಿದ್ದರು. ಆದರೆ, ಸಭೆಯಲ್ಲಿ ಡಾ.ಯತೀಂದ್ರ ಮೌನವಾಗಿದ್ದರು ಎಂದು ದೂರುದಾರರ ಪರ ವಾದ ಮಂಡಿಸಲಾಗಿದೆ. ಈ ವಾದ ಹಾಸ್ಯಾಸ್ಪದ. ಒಬ್ಬ ಕಾನೂನು ನಿರ್ಮಾತೃ, ಮಾಜಿ ಮುಖ್ಯಮಂತ್ರಿಯ ಮತ್ತು ಆಗಿನ ಪ್ರತಿಪಕ್ಷದ ನಾಯಕನ ಮಗ, ವಿಷಯದ ಬಗ್ಗೆ ಚರ್ಚೆ ನಡೆಯುವಾಗ ಮೌನವಾಗಿದ್ದರು ಎಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.

14 ಸೈಟ್‌ಗಳ ಕುರಿತು ತನಿಖೆ ನಡೆಯಲಿ: ಕೆಸರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡ ಜನರಿಗೆ ಮೈಸೂರಿನ ಶ್ರೀಮಂತ ಬಡಾವಣೆಯಲ್ಲಿ ಜಮೀನು ನೀಡಿದ ಒಂದೇ ಒಂದು ಉದಾಹರಣೆಯನ್ನು ಉಲ್ಲೇಖಿಸಿಲ್ಲ. ಮುಖ್ಯಮಂತ್ರಿಯ ಪತ್ನಿಗೆ 50:50 ಮೂಲಕ ಹಂಚಿಕೆಯ ಲಾಭ ದಕ್ಕುತ್ತಿದ್ದಂತೆ ಆ ನಿಯಮವನ್ನು ಹಿಂಪಡೆಯವ ಪ್ರಯತ್ನ ನಡೆದಿರುವುದು ಅಚ್ಚರಿಯ ಸಂಗತಿ. ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾದ ಬಳಿಕ (ಅಕ್ಟೋಬರ್, 27) 50:50 ಅನುಪಾತದಲ್ಲಿ ಪರಿಹಾರ ಭೂಮಿ ನೀಡುವ ನಿರ್ಣಯವನ್ನು ಮುಡಾ ಹಿಂತೆಗೆದುಕೊಂಡಿತ್ತು. ಆ ಸಭೆಯಲ್ಲಿ ಯತೀಂದ್ರ ಅವರು ಭಾಗಿಯಾಗಿದ್ದರು. ಕಾನೂನುಬಾಹಿರ ನಿರ್ಣಯದ ಆಧಾರದ ಮೇಲೆ ನೀಡಲಾಗಿರುವ 14 ಸೈಟ್‌ಗಳ ಕುರಿತು ತನಿಖೆ ನಡೆಯಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಇದನ್ನೂ ಓದಿ:ರಾಜ್ಯಪಾಲರ ನಿರ್ಧಾರದಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ: ಹೈಕೋರ್ಟ್ - High Court

ABOUT THE AUTHOR

...view details