ಬೆಳಗಾವಿ:ಹಬ್ಬಗಳು ನಮ್ಮ ಮೂಢನಂಬಿಕೆಯ ತಾಣವಾಗಬಾರದು. ಮೂಲ ನಂಬಿಕೆಗಳಾಗಿಯೇ ಅವು ಉಳಿಯಬೇಕು. ಅದೇ ರೀತಿ ಅಂಧಾನುಕರಣೆ ಮಾಡದೇ ಹಬ್ಬದ ಉದ್ದೇಶ ತಿಳಿಯಬೇಕು. ವೈಜ್ಞಾನಿಕ ತಳಹದಿಯ ಮೇಲೆ, ಆಧುನಿಕತೆಗೆ ತಕ್ಕಂತೆ ಹಬ್ಬಗಳನ್ನು ಆಚರಿಸುವ ಅವಶ್ಯಕತೆ ಇದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ ಇಂದು ವಿಶ್ವಗುರು ಬಸವಣ್ಣನವರ 829ನೇ ಲಿಂಗೈಕ್ಯ ವರ್ಷದ ಹಿನ್ನೆಲೆಯಲ್ಲಿ ಬಸವ ಪಂಚಮಿ ನಿಮಿತ್ತ ಅಖಿಲ ಭಾರತ ಲಿಂಗಾಯತ ಮಹಾಸಭಾ, ಸಂಚಾರಿ ಗುರುಬಸವ ಬಳಗದಿಂದ ಮಠದ ನಿಲಯದ ಮಕ್ಕಳಿಗೆ ಉಚಿತ ಪ್ರಸಾದ, ಹಾಲು ವಿತರಿಸಿ ಅವರು ಮಾತನಾಡಿದರು.
ಮೂಢನಂಬಿಕೆ ಎಂದು ಗೊತ್ತಾದ ಮೇಲೆ ಅದೆಷ್ಟೋ ಹಳೆಯ ಆಚರಣೆಗಳನ್ನು ನಾವು ಬದಲಾಯಿಸಿಕೊಂಡಿದ್ದೇವೆ. ಹಾಗಾಗಿ, ಪಂಚಮಿ ನಿಮಿತ್ತ ಹಾಲನ್ನು ಕಲ್ಲಿಗೆ ಎರೆದು ವ್ಯರ್ಥ ಮಾಡುವ ಬದಲು, ಹಸಿದ ಮಕ್ಕಳಿಗೆ ನೀಡುವುದು ಉತ್ತಮ ಕಾರ್ಯ ಎಂದರು.
ಅದೇ ರೀತಿ ರಾಷ್ಟ್ರೀಯ ಬಸವದಳ, ಅಖಿಲ ಭಾರತ ಲಿಂಗಾಯತ ಮಹಾಸಭಾ, ಮಾನವ ಬಂಧುತ್ವ ವೇದಿಕೆ ಸೇರಿ ವಿವಿಧ ಲಿಂಗಾಯತರ ಪರ ಸಂಘಟನೆಗಳ ಆಶ್ರಯದಲ್ಲಿ ಮಹೇಶ ಫೌಂಡೇಶನ್ ಹೆಚ್ಐವಿ ಪೀಡಿತ ಮಕ್ಕಳು ಹಾಗೂ ಬಸವನಕುಡಚಿಯ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮ ವೃದ್ಧರಿಗೆ ಹಾಲು ವಿತರಿಸಲಾಯಿತು. ಮಹಾಂತೇಶ ನಗರದ ಬಸವಮಂಟಪದಲ್ಲೂ ಬಸವ ಪಂಚಮಿ ಆಚರಿಸಲಾಯಿತು.
ನಾಗದೇವರಿಗೆ ವಿಶೇಷ ಪೂಜೆ: ನೆಹರು ನಗರದಲ್ಲಿ ನಾಗ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ನಾಗದೇವನಿಗೆ ನಾಗಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆದವು. ತೆಂಗಿನ ಕಾಯಿ ಒಡೆದು ಹಾಲೆರೆದು ಭಕ್ತರು ಪೂಜೆ ಸಲ್ಲಿಸಿದರು.