ಮೈಸೂರು: ಸಾಂಸ್ಕೃತಿಕ ನಗರದಲ್ಲಿ ದೊಡ್ಡಾಸ್ಪತ್ರೆ ಎಂದೇ ಖ್ಯಾತಿ ಗಳಿಸಿರುವ ಕೆ.ಆರ್. ಆಸ್ಪತ್ರೆ ವೈದ್ಯರು ದೇಶದಲ್ಲಿಯೇ ಅಪರೂಪ ಎನಿಸಿರುವ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ವಯೋ ವೃದ್ಧರೊಬ್ಬರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೀವ ನೀಡಿದ್ದಾರೆ.
ಸವಾಲಿನ ನಡುವೆ ಯಶಸ್ವಿ ಶಸ್ತ್ರ ಚಿಕಿತ್ಸೆ:ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 72 ವರ್ಷದ ವಯೋವೃದ್ಧರ ಬಲಭಾಗದ ಯಕೃತ್ (RIGHT HEPETECTOMY) ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವೇಳೆ, ಯಕೃತ್ನ ಅರ್ಧ ಭಾಗವನ್ನ ಕತ್ತರಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವಯೋವೃದ್ಧರ ಶೇ.60 ರಷ್ಟು ಭಾಗದ ಯಕೃತ್ ಕತ್ತರಿಸಿದಾಗ ರಕ್ತಸ್ರಾವ ಹೆಚ್ಚಾಗುತ್ತದೆ. ಇದರ ನಿರ್ವಹಣೆಗೆ ಕ್ಯಾವಿಟ್ರಾನ್ ಅಲ್ಟ್ರಾಸಾನಿಕ್ ಸರ್ಜಿಕಲ್ ಆಸ್ಪಿರೇಟರ್ (CUSA) ನಂತಹ ಹೈಟೆಕ್ ಉಪಕರಣದ ಅಗತ್ಯವಿದೆ. ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ ಇರುವ ಹೈಟೆಕ್ ಸಲಕರಣೆಗಳು ಕೆ.ಆರ್. ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಆದರೂ ಸಿಯುಎಸ್ಎ ಉಪಕರಣ ಬಳಸದೇ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಗಮನ ಸೆಳೆದಿದ್ದಾರೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಎಸ್. ಚಂದ್ರಶೇಖರ್, ಸರ್ಜಿಕಲ್ ಅಂಕೋಲಜಿ ವಿಭಾಗದ ಕ್ಯಾನ್ಸರ್ ತಜ್ಞ ಡಾ.ನವೀನ್ ಗೌಡ, ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದ ಡಾ. ಶ್ರೀವತ್ಸ ಅರವಳಿಕೆ ವಿಭಾಗದ ಡಾ.ವಿ.ವೈ.ಶ್ರೀನಿವಾಸ್, ಡಾ.ದೀಪಾ, ಡಾ.ಪೂಲನ್ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗೆ ಮರುಜೀವ ನೀಡಿದೆ.