ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ನೀಡಿದ ನೋಟಿಸ್‌ನಿಂದ ಆತಂಕಗೊಂಡಿದ್ದ ರೈತರು ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಹಾಗೂ ವಕ್ಫ್ ಕಾಯ್ದೆ-2024ರ ಜಂಟಿ ಸದನ ಸಮಿತಿಯ ಸದಸ್ಯರೂ ಆಗಿರುವ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿ ವಕ್ಫ್ ಅಕ್ರಮಗಳ ವಿರುದ್ಧ ನ್ಯಾಯ ಒದಗಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದರು. ಈ ವೇಳೆ ಸಂಸದರ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ನಡೆಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ನೆರವಿನಿಂದ ವಕ್ಫ್ ಬೋರ್ಡ್ ರೈತರ ಭೂಮಿಗಳನ್ನು ಕಬಳಿಸಲು ಷಡ್ಯಂತ್ರ ನಡೆದಿದೆ ಎಂದು ಕಿಡಿಕಾರಿದರು. ತರಾತುರಿಯಲ್ಲಿ ನೀಡಲಾಗಿರುವ ವಕ್ಫ್ ಬೋರ್ಡ್‌ನ ನೋಟಿಸ್‌ನಿಂದ ರಾಜ್ಯದ ಸಾವಿರಾರು ರೈತರು ಮತ್ತು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಶೀಘ್ರವೇ ಅವರ ಆತಂಕ ದೂರ ಮಾಡಿ ನ್ಯಾಯ ನೀಡುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯೊಂದರಲ್ಲೇ 15 ಸಾವಿರಕ್ಕೂ ಅಧಿಕ ಎಕರೆ ಜಾಗವನ್ನು ವಕ್ಫ್ ತನ್ನ ಆಸ್ತಿ ಎಂದು ನೋಟಿಸ್ ಜಾರಿಗೊಳಿಸಿದೆ. ದೇಶದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಜಾರಿಯಾಗುವುದಕ್ಕೂ ಮುಂಚಿತವಾಗಿ ಕರ್ನಾಟಕದಲ್ಲಿ ಈ ವಕ್ಫ್ ಕಾನೂನು ಬದಲಾಗುವುದಕ್ಕೂ ಸಾಧ್ಯವಾದಷ್ಟು ಜಾಗವನ್ನು ವಕ್ಫ್ ಹೆಸರಿಗೆ ನೋಂದಣಿಗೊಳಿಸಬೇಕು ಎನ್ನುವ ಹುನ್ನಾರದಲ್ಲಿ ಪ್ರಯತ್ನ ನಡೆಸುತ್ತಿರುವುದು ಅಕ್ಷ್ಯಮ್ಯ ಎಂದರು.
ಸಚಿವ ಜಮೀರ್ ಅಹ್ಮದ್ ವಿರುದ್ಧ ಆರೋಪ ಮಾಡಿದ ಸಂಸದರು, ಕಳೆದ 2-3 ವಾರದ ಹಿಂದೆ ಜಮೀರ್ ಅಹ್ಮದ್ ರಾಜ್ಯದ ಕೆಲವು ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳಿಗೆ ಮತ್ತು ಮುಸ್ಲಿಂ ಸಮಾಜದ ಮುಖಂಡರ ಜೊತೆ ಸಭೆ ನಡೆಸಿ ವಕ್ಫ್ ಬೋರ್ಡ್ ಹೆಸರಿಗೆ ರಿಜಿಸ್ಟರ್ ಮಾಡಿಸಲು ಸೂಚನೆ ನೀಡಿದ್ದಾರೆ. ಸಚಿವರ ಅದೇಶದ ಮೇರೆಗೆ ಜಿಲ್ಲಾಧಿಕಾರಿಗಳು, ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಜಮೀನಿನ ಪಹಣಿಗಳನ್ನು ರಾತ್ರೋರಾತ್ರಿ ಬದಲಾವಣೆ ಮಾಡಿದ್ದಾರೆ. 1920ರಿಂದ ಇಲ್ಲಿ ರೈತರು ಸಾಗುವಳಿ ಮಾಡಿಕೊಂಡು ಬಂದಿರುವ ದಾಖಲೆಗಳಿದ್ದರೂ ಸಹ ರೈತರ ಜಮೀನು ಮಾತ್ರವಲ್ಲದೇ ಹಿಂದೂಗಳ ರುದ್ರಭೂಮಿಯನ್ನು ಸಹ ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಕಬಳಿಕೆ ಮಾಡಲು ಅಧಿಕಾರಿಗಳೂ ಸಹ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.