ವಿಜಯಪುರ:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಇಂದು ನಡೆದಿದೆ. ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸಿದರೆ, ನಾಲ್ವರು ಮಕ್ಕಳು ಜಲಸಮಾಧಿ ಆಗಿದ್ದಾರೆ.
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳೆಂದು ತಿಳಿದು ಬಂದಿದೆ. ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದ ಭಾಗ್ಯಶ್ರೀ ನಿಂಗರಾಜ ಭಜಂತ್ರಿ ಎಂಬ ಮಹಿಳೆಯನ್ನು ಮೀನುಗಾರರು ಕಾಲುವೆ ನೀರಿನಿಂದ ಎತ್ತಿ ಬದುಕಿಸಿದ್ದಾರೆ.
ನಿಂಗರಾಜ ಭಜಂತ್ರಿ (ETV Bharat) ಮೃತರಲ್ಲಿ ಅವಳಿ ಗಂಡು ಮಕ್ಕಳಿದ್ದರೆ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತನು ಹಾಗೂ ರಕ್ಷಾ ಎಂಬ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದ್ದು, ಹಸೇನ್ ಹಾಗೂ ಹುಸೇನ್ ಎಂಬ ಅವಳಿ ಗಂಡು ಮಕ್ಕಳ ಶವಕ್ಕಾಗಿ ನಿಡಗುಂದಿ ಪೊಲೀಸರು ಅಗ್ನಿಶಾಮಕ ದಳ ಹಾಗೂ ಮೀನುಗಾರರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ.
ಘಟನೆಯ ವಿವರ: ಮೃತ ಮಕ್ಕಳ ತಂದೆ ನಿಂಗರಾಜ ಭಜಂತ್ರಿ ಪತ್ನಿ ಸಹಿತ ಇಂದು ಬನದ ಹುಣ್ಣಿಮೆ ಇದ್ದುದರಿಂದ ನಿಡಗುಂದಿ ತಾಲೂಕಿನ ಎಲ್ಲಮ್ಮನ ಬೂದಿಹಾಳ ಗ್ರಾಮಕ್ಕೆ ದೇವರ ದರ್ಶನಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ್ದರು. ಆಲಮಟ್ಟಿ ಎಡದಂಡೆ ಕಾಲುವೆ ಬಳಿ ಬೈಕ್ನಲ್ಲಿನ ಪೆಟ್ರೋಲ್ ಖಾಲಿಯಾಗಿದ್ದರಿಂದ ಮಕ್ಕಳು ಹಾಗೂ ಪತ್ನಿಯನ್ನ ಕಾಲುವೆ ಬಳಿ ನಿಲ್ಲಿಸಿ ಪೆಟ್ರೋಲ್ ತರಲು ತೆರಳಿದ್ದ. ವಾಪಸ್ ಬರುವಷ್ಟರಲ್ಲಿ ನಾಲ್ಕು ಮಕ್ಕಳನ್ನ ಕಾಲುವೆಗೆ ಎಸೆದು ಭಾಗ್ಯಶ್ರೀ ಕೂಡ ಕಾಲುವೆಗೆ ಧುಮುಕಿದ್ದಳು. ಈ ದೃಶ್ಯ ಕಂಡ ಸ್ಥಳೀಯ ಮೀನುಗಾರರು, ಭಾಗ್ಯಶ್ರೀಯನ್ನು ರಕ್ಷಿಸಿದರೆ, ನಾಲ್ವರು ಮಕ್ಕಳು ಜಲಸಮಾಧಿ ಆಗಿದ್ದಾರೆ.
ತೀವ್ರ ಅಸ್ವಸ್ಥಳಾಗಿದ್ದ ಭಾಗ್ಯಶ್ರೀಯನ್ನು ಮೊದಲು ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.
ಆಸ್ತಿ ವಿಚಾರವಾಗಿ ಮನೆಯಲ್ಲಿ ನಿನ್ನೆ ಜಗಳವಾಗಿತ್ತು. ಜಗಳದ ಬಳಿಕ ನಾನು ಇಲ್ಲದ ವೇಳೆ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆ ರೀತಿ ಮಾಡಿಕೊಳ್ಳದಂತೆ ನಾನೇ ಬುದ್ಧಿ ಮಾತು ಹೇಳಿದ್ದೆ. ಬೆಂಗೂಳೂರಿಗೆ ಹೋಗೋಣ, ದುಡಿದು ಜೀವನ ಮಾಡೋಣ ಎಂದು ತಿಳಿ ಹೇಳಿ ಕುಟುಂಬ ಸಮೇತ ಬೈಕ್ನಲ್ಲಿ ಇಂದು ದೇವರಿಗೆ ಬಂದಿದ್ದೆವು. ಪೆಟ್ರೋಲ್ ಖಾಲಿಯಾಗಿದ್ದರಿಂದ ಅವರಿಗೆ ಇಲ್ಲಿಯೇ ಇರುವಂತೆ ಹೇಳಿ ನಾನು ಮುಂದೆ ತೆರಳಿದ್ದೆ. ಕೆಲವು ಹೆಜ್ಜೆ ಮುಂದೆ ಹೋಗುತ್ತಿದ್ದಂತೆ ಯಾರೋ ಕಾಲುವೆಗೆ ಜಿಗಿದರೆಂದು ಮಾತನಾಡಿಕೊಳ್ಳಲಾಂಬಿಸಿದರು. ನಿಂಗರಾಜ ಭಜಂತ್ರಿ - ನಾಲ್ವರು ಮಕ್ಕಳನ್ನು ಕಳೆದುಕೊಂಡ ತಂದೆ
ನಮಗೆ ಒಬ್ಬಳೆ ಮಗಳು. ತೆಲಗಿ ಗ್ರಾಮದ ನಿಂಗರಾಜನಿಗೆ ಕೊಟ್ಟು ಮದುವೆ ಮಾಡಿದ್ದೆವು. ಅಳಿಯ ಸಾಲ ಮಾಡಿದ್ದಾನೆಂದು ಬೀಗರು ಹೇಳಿದ್ದರು. ಸಾಲ ತೀರಿಸಲು ಜಮೀನು ಮಾರಾಟ ಮಾಡುವ ಬಗ್ಗೆ ಮಾತನ್ನಾಡಿದ್ದರು. ಅದಕ್ಕೆ ಜಗಳವಾಗಿತ್ತು. ಆಸ್ತಿ ಮಾರಾಟ ಹಾಗೂ ಸಾಲದ ವಿಚಾರದಲ್ಲಿ ನನ್ನ ಮಗಳ ಮೇಲೆ ಅಳಿಯ ನಿಂಗರಾಜ, ಆತನ ತಂದೆ ಹಾಗೂ ತಾಯಿ ಹಲ್ಲೆ ಮಾಡಿದ್ದರು. ಇಂದು ದೇವರ ದರ್ಶನಕ್ಕೆ ಯಲ್ಲಮನ ಬೂದಿಹಾಳಕ್ಕೆ ಹೊರಟಿದ್ದರು. ನಾಲ್ಕೂ ಮಕ್ಕಳು ಹಾಗೂ ನನ್ನ ಮಗಳೊಂದಿಗೆ ಹೋಗುತ್ತಿದ್ದರು. ಆದರೆ, ಎಲ್ಲರನ್ನೂ ಕಾಲುವೆ ಬಳಿ ಏಕೆ ಬಿಟ್ಟು ಹೋಗಬೇಕಿತ್ತು? ಭಾಗ್ಯಶ್ರೀ ಹಾಗೂ ನಾಲ್ಕೂ ಮಕ್ಕಳು ಕಾಲುವೆಯಲ್ಲಿ ಬಿದ್ದಿದ್ದರ ಬಗ್ಗೆ ನಮಗೆ ಸಂಶಯವಿದೆ. ಅಳಿಯ ನಿಂಗರಾಜನ ಕೈವಾಡವಿರಬಹುದು. ಇತರರೊಂದಿಗೆ ಕೂಡಿ ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಕಾಲುವೆಗೆ ನೂಕಿರಬಹುದು. ಅಳಿಯ ನಿಂಗರಾಜ, ಆತನ ತಂದೆ-ತಾಯಿ ಮೇಲೆ ನಮಗೆ ಅನುಮಾನವಿದೆ.ಗುಂಡಮ್ಮ - ಭಾಗ್ಯಶ್ರೀ ತಾಯಿ
ಇದನ್ನೂ ಓದಿ:ಕೌಟುಂಬಿಕ ಕಲಹ: ಕೆರೆಯಲ್ಲಿ ಬಿದ್ದು ತಂದೆ ಹಾಗೂ ಇಬ್ಬರು ಮಕ್ಕಳ ಸಾವು - crime news