ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ದಿನದಂದು 2 ಲಕ್ಷ ಜನರಿಂದ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ವೀಕ್ಷಣೆ - Lalbagh Flower Show - LALBAGH FLOWER SHOW

ಸ್ವಾತಂತ್ರ್ಯೋತ್ಸವದಂದು ಲಾಲ್​ಬಾಗ್​ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.

lalbagh flower show
ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ (ETV Bharat)

By ETV Bharat Karnataka Team

Published : Aug 16, 2024, 9:18 AM IST

ಬೆಂಗಳೂರು:78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಪುಷ್ಪಕಾಶಿ ಲಾಲ್​ಬಾಗ್​ನಲ್ಲಿ ಆಯೋಜಿಸಿರುವ 216ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಸುಮಾರು 2.10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತ ಪ್ರದರ್ಶನವನ್ನು ವೀಕ್ಷಿಸಿದರು.

ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನದಲ್ಲಿ ಮಕ್ಕಳು (ETV Bharat)

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಸೇರಿದಂತೆ ನಗರದ ಎಲ್ಲ ರೀತಿಯ ಕಚೇರಿಗಳಿಗೆ ಸಾರ್ವತ್ರಿಕ ರಜೆ ಇತ್ತು. ಹೀಗಾಗಿ, ಬೆಂಗಳೂರು ನಗರ ಮಾತ್ರವಲ್ಲದೇ, ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಆಗಮಿಸಿ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಬೆಂಗಳೂರು ನಗರ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಸಾವಿರಾರು ಜನ ಲಾಲ್‌ಬಾಗ್‌ನಲ್ಲಿ ಕಳೆದರು. ದಿನಪೂರ್ತಿ ಬಿಸಿಲಿದ್ದರೂ ಮಧ್ಯಾಹ್ನದ ಬಳಿಕ ನಗರದಲ್ಲಿ ತುಂತುರು ಮಳೆಯಾಯಿತು.

ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನದಲ್ಲಿ ಜನಸ್ತೋಮ (ETV Bharat)

ಈ ನಡುವೆ ಜನರು ಗಾಜಿನ ಮನೆಯ ಒಳಪ್ರವೇಶಕ್ಕೆ ಉದ್ದುದ್ದದ ಸಾಲುಗಳಲ್ಲಿ ನಿಂತು ಪ್ರದರ್ಶನ ವೀಕ್ಷಣೆ ಮಾಡುತ್ತ ಸೆಲ್ಫಿ, ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದರು. ಪ್ರದರ್ಶನದಲ್ಲಿ ಪ್ರಮುಖವಾಗಿ ಸಂಸತ್ ಭವನ ಹಾಗೂ ಅಂಬೇಡ್ಕರ್​ ಅವರು ಸಂವಿಧಾನ ರಚನಾ ಸಭೆಯಲ್ಲಿ ಭಾಷಣ ಮಾಡಿರುವ ದೃಶ್ಯಗಳು ಅತ್ಯಂತ ಪ್ರಮುಖ ಆಕರ್ಷಣೆಯಾಗಿತ್ತು. ಜೊತೆಗೆ, ತ್ರಿವರ್ಣ ಬಣ್ಣಗಳಲ್ಲಿ ರಚನೆ ಮಾಡಿರುವ ಭಾರತದ ಭೂಪಟದ ಮುಂದೆ ಏಕಕಾಲಕ್ಕೆ ಜನರು ಆಗಮಿಸುತ್ತಿದ್ದರು.

ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನಕ್ಕೆ ಬಂದಿರುವ ಜನರು (ETV Bharat)

ಐಟಿ ಉದ್ಯೋಗಿಗಳು, ಶಾಲೆ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಿಕ್ಕಿರಿದು ಸೇರಿದ್ದ ಜನರು, ಗಾಜಿನ ಮನೆಯೊಳಗೆ ಹಾಗೂ ಹೊರಗೆ ನಿರ್ಮಿಸಲಾದ ಹೂಗಳ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಬ್ಬಂದಿ ಹರಸಾಸಹ:ಗಾಜಿನ ಮನೆ ಪ್ರವೇಶಿಸುತ್ತಿದ್ಧ ಜನ ಫೋಟೋ ತೆಗೆದುಕೊಳ್ಳುವುದರಲ್ಲಿ ನಿರತರಾಗಿ ಕಾಲಹರಣ ಮಾಡುತ್ತಿದ್ದರು. ಅವರನ್ನು ಹೊರಗೆ ಕಳಿಸಲು ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು.

ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದ ಜನರು (ETV Bharat)

2.12 ಕೋಟಿ ರೂ. ಸಂಗ್ರಹ: ಆಗಸ್ಟ್ 8ರಿಂದ ಫಲಪುಷ್ಪ ಪ್ರದರ್ಶನದ ಪ್ರಾರಂಭವಾಗಿದೆ. ಈವರೆಗೂ ಸುಮಾರು 5.50 ಲಕ್ಷಕ್ಕೂ ಹೆಚ್ಚು ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಾಲ್‌ಬಾಗ್‌ಗೆ ಆಗಮಿಸಿದ್ದಾರೆ. ಒಟ್ಟಾರೆ 2.12 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಅಂಬೇಡ್ಕರ್ ಜೀವನಾಧಾರಿತ ಲಾಲ್​ಬಾಗ್​ ಫ್ಲವರ್​ಶೋಗೆ ಜನಸಾಗರ - Lal bagh Flower Show

ABOUT THE AUTHOR

...view details