ಕಾರಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಹಣ ವಶಕ್ಕೆ ಬೆಂಗಳೂರು:ಕಾರೊಂದರಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದ್ದು ಚುನಾವಣೆ ಅಧಿಕಾರಿಗಳು ಈ ಸಂಬಂಧ ಹಣ ಸಮೇತ ಎರಡು ಕಾರುಗಳು ಹಾಗೂ ಒಂದು ದ್ವಿಚಕ್ರವಾಹನವನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರದ 4ನೇ ಹಂತದ ಬಳಿ ಹಣ ವಶಕ್ಕೆ ಪಡೆಯಲಾಗಿದೆ. ಹಣ ಸಾಗಾಟದ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಬೆಂಗಳೂರು ನಗರ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ದೊರೆತಿರುವ ಹಣವನ್ನು ಜಯನಗರ ಪೊಲೀಸ್ ಠಾಣೆಯಲ್ಲಿ ಎಣಿಸಲಾಗುತ್ತಿದೆ.
ಹಣದೊಂದಿಗೆ ಜಪ್ತಿ ಮಾಡಿಕೊಂಡಿರುವ ಮರ್ಸಿಡೀಸ್ ಬೆನ್ಜ್ ಕಾರು ನಿನ್ನೆಯಷ್ಟೇ ನೋಂದಣಿಯಾಗಿದ್ದು ಸೋಮಶೇಖರ್ ಎಂಬುವರ ಹೆಸರಿನಲ್ಲಿದ್ದರೆ, ದ್ವಿಚಕ್ರ ವಾಹನವು ಧನಂಜಯ್ ಎಂಬುವರಿಗೆ ಸೇರಿದೆ. ಮತ್ತೊಂದು ಕಾರು ವೋಕ್ಸ್ ವ್ಯಾಗನ್ ಪೋಲೋ ಮಾಲೀಕರು ಯಾರು ಎಂಬುದು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಮಾತನಾಡಿ, ನಮಗೆ ಇಂದು ಬೆಳಗ್ಗೆ ಕರೆ ಬಂದಿತ್ತು. ವಾಹನದಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಈ ವೇಳೆ ಜಯನಗರ ನೋಡಲ್ ಅಧಿಕಾರಿ ನಿಕಿತಾ ಅವರಿಗೆ ಕೂಡಲೇ ಸ್ಥಳಕ್ಕೆ ತೆರಳುವಂತೆ ತಿಳಿಸಿ ತಾವು ಬರುತ್ತಿರುವುದಾಗಿ ಹೇಳಿದ್ದೆವು. ಈ ವೇಳೆ ಸ್ಕೂಟರ್ನಿಂದ ಫಾರ್ಚೂನರ್ ಕಾರಿಗೆ ಹಣ ಸಾಗಿಸುತ್ತಿದ್ದರು.
ನಿಕಿತ ಒಬ್ಬರೇ ಇದ್ದಿದ್ದರಿಂದ ತಕ್ಷಣ ದ್ವಿಚಕ್ರ ವಾಹನದ ಮೇಲೆ ದಾಳಿ ಮಾಡಿ ಅದರಲ್ಲಿದ್ದ ಒಂದು ಬ್ಯಾಗ್ ಅನ್ನು ಜಪ್ತಿ ಮಾಡಿದ್ದಾರೆ. ಈ ವೇಳೆ ಎರಡು ಕಾರು ಮತ್ತು ದ್ವಿಚಕ್ರವಾಹನವನ್ನು ಸ್ಥಳದಲ್ಲೇ ಬಿಟ್ಟು ಫಾರ್ಚೂನರ್ ಕಾರು ಸಮೇತ ಐದು ಜನರು ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ವಾಹನದ ನಂಬರನ್ನು ಕೂಡ ನೋಟ್ ಮಾಡಿಕೊಳ್ಳಲಾಗಿದೆ. ಸಿಕ್ಕಿರುವ ಬ್ಯಾಗ್ನಲ್ಲಿ ಸುಮಾರು 1 ಕೋಟಿಗೂ ಅಧಿಕ ಹಣವಿದೆ. ಮುಂದಿನ ಕಾನೂನುಕ್ರಮವನ್ನು ಪೊಲೀಸರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ: ರಾಮನಗರ ಬಳಿ 10 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶ - Lok Sabha election