ಮೈಸೂರು:ಬೈರತಿ ಸುರೇಶ್ ಮಂತ್ರಿತರಹ ವರ್ತನೆ ಮಾಡು ಎಂದರೆ ಬೇರೆ ತರಹವೇ ಮಾಡುತ್ತಿದ್ದಾರೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮ ಶುದ್ಧ ಶ್ವೇತ ಪಂಚೆಯ ಮೇಲೆ ಕಪ್ಪು ಅಲ್ಲಲ್ಲೇ ಕಾಣುತ್ತಿದೆ. ಸರಿಪಡಿಸಿಕೊಳ್ಳಲಿಲ್ಲ ಎಂದರೆ, ನಿಮ್ಮ ಮೇಲೆ ಮಸಿ ಬಳೆದು ಹೊರಟು ಹೋಗುತ್ತಾರೆ ಎಂದು ಎಚ್ಚರಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 5 ಸಾವಿರ ಕೋಟಿ ಹಗರಣವಾಗಿದೆ. ಇದಕ್ಕೆ ರಿಯಲ್ ಎಸ್ಟೇಟ್ ಗಿರಾಕಿ, ಸಚಿವ ಬೈರತಿ ಸುರೇಶ್ ಕಾರಣ. ಮೊದಲು ಆತನನ್ನು ಒದ್ದು ಒಳಗೆ ಹಾಕಿ. ಸಿದ್ದರಾಮಯ್ಯನವರೇ ನೀವು ಮುಡಾದಲ್ಲಿ ನಿಮ್ಮ ಹೆಂಡತಿ ಹೆಸರಿನಲ್ಲಿ ಪಡೆದಿರುವ ನಿವೇಶನಗಳನ್ನು ವಾಪಸ್ ನೀಡಿ ತನಿಖೆಗೆ ಸಹಕರಿಸಿ. ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ ನಾಗೇಂದ್ರ ತಲೆದಂಡವಾಯಿತು. ಇದಕ್ಕೆ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಕೂಡ ಹೊಣೆಗಾರರು. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರಲಿಲ್ಲ ಎಂದರು.
ಮುಡಾ ಹಗರಣದಲ್ಲಿ ನಾವು ಯಾರು 50:50 ಅನುಪಾತದಲ್ಲಿ ನಿವೇಶನ ಪಡೆದಿಲ್ಲ. ಕಾನೂನು ಪ್ರಕಾರ ನಿವೇಶನ ಪಡೆದಿದ್ದೇವೆ. ರಾಜ್ಯ ಸರ್ಕಾರ ಮುಡಾ ಹಾಗೂ ವಾಲ್ಮೀಕಿ ಹಗರಣದಿಂದ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿಗಳು ಏಕಾಂಗಿಯಾಗಿದ್ದು, ಹೆದರಿ ಏನೇನೋ ಮಾತನಾಡುತ್ತಿದ್ದಾರೆ. ದೇವೇಗೌಡ ಕುಟುಂಬ, ಯಡಿಯೂರಪ್ಪ ಅವರ ಕುಟುಂಬ ಎಲ್ಲರೂ ನಿವೇಶನ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ಅವರು ಯಾರು 50:50 ಅನುಪಾತದಲ್ಲಿ ನಿವೇಶನ ಪಡೆದಿಲ್ಲ. ಮುಡಾ ಎಕ್ಕುಟ್ಟು ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದನ್ನು ಸರಿಪಡಿಸುವ ಬದಲು ನೀವು ಮಾಡಿಲ್ವಾ, ಅವರು ಮಾಡಿಲ್ವಾ ಎಂದು ಹೇಳುತ್ತಿದ್ದಾರೆ. ಆಡಳಿತದಲ್ಲಿ ಇರುವ ಸರ್ಕಾರ ಭಂಡತನ ಮಾಡಬಾರದು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.