ಕರ್ನಾಟಕ

karnataka

ETV Bharat / state

ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ ಆಗಮಿಸಿ ಮತದಾನ ಮಾಡಿದ ವಿನಯ್ ಕುಲಕರ್ಣಿ - MLA Vinay Kulkarni

ಶಾಸಕ ವಿನಯ್ ಕುಲಕರ್ಣಿ ಇಂದು ಧಾರವಾಡ ಮತಗಟ್ಟೆ 75ಕ್ಕೆ ಆಗಮಿಸಿ ಹಕ್ಕು ಚಲಾಯಿಸಿದರು.

Vinay Kulkarni
ವಿನಯ್ ಕುಲಕರ್ಣಿ (ETV Bharat)

By ETV Bharat Karnataka Team

Published : May 7, 2024, 7:31 PM IST

ನಾಲ್ಕು ವರ್ಷದ ಬಳಿಕ ಜಿಲ್ಲೆಗೆ ಆಗಮಿಸಿ ಮತದಾನ ಮಾಡಿದ ವಿನಯ್ ಕುಲಕರ್ಣಿ (ETV Bharat)

ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಜಿಲ್ಲೆಯಿಂದ ಹೊರಗಿರುವ ಶಾಸಕ ವಿನಯ್ ಕುಲಕರ್ಣಿ ಇಂದು ಆಗಮಿಸಿ ಮತದಾನ ಮಾಡಿದರು.

ಶಾಸಕ ವಿನಯ್​ ಕುಲಕರ್ಣಿಗೆ ಮತ ಹಾಕಲು ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆ ಧಾರವಾಡ ಮತಗಟ್ಟೆ 75ಕ್ಕೆ ಪತ್ನಿ ಶಿವಲೀಲಾ ಮತ್ತು ಮಗಳು ವೈಶಾಲಿ ಜೊತೆ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದರು. ನಗರದ ಶಾರದಾ ಶಾಲೆಯಲ್ಲಿನ ಮತಗಟ್ಟೆ ಸ್ಥಳದಲ್ಲಿ ಭಾರೀ ಬಿಗಿಭದ್ರತೆ ಹಾಗೂ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ವಿನಯ್ ಕುಲಕರ್ಣಿ ಬರುವ ಸುದ್ದಿ ತಿಳಿಯುತ್ತಿದ್ದಂತೆ ವಿನಯ್ ಅಭಿಮಾನಿಗಳು ಸ್ಥಳದತ್ತ ಆಗಮಿಸಿದ್ದರು. ಅವರು ಬರುತ್ತಿದ್ದಂತೆ ವಿಕೆ ವಿಕೆ ಎಂದು ಘೋಷಣೆ ಕೂಗಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಸಾಹಸ ಪಡುವಂತಾಯಿತು.

ನಾಲ್ಕು ವರ್ಷಗಳ ನಂತರ ಜಿಲ್ಲೆಗೆ ಬಂದಿರುವ ವಿನಯ್ ಕುಲಕರ್ಣಿ ಈ ಹಿಂದೆ ಜಿಪಿಎ ಮಾಡಲು ಆಗಮಿಸಿದ್ದನ್ನು ಹೊರತುಪಡಿಸಿದ್ರೆ, ಇಂದು ಆಗಮಿಸಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ವಿನಯ್ ಕುಲಕರ್ಣಿ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ಸಹ ನ್ಯಾಯಾಲಯ ಅವರಿಗೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಮತ ಹಾಕಲು ಅವಕಾಶ ನೀಡಿ ಎಂದು‌ ಮನವಿ‌ ಮಾಡಿದ್ದರು. ನ್ಯಾಯಾಲಯ ಅನುಮತಿ ನೀಡಿದ ಬೆನ್ನಲ್ಲೇ ಆಗಮಿಸಿ ಮತದಾನ ಮಾಡಿದರು.

ಮತದಾನದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿನಯ ಕುಲಕರ್ಣಿ, ''ನಾಲ್ಕು ವರ್ಷಗಳ ಬಳಿಕ ಕೋರ್ಟ್ ನನಗೆ ಮತ ಹಾಕಲು ಅನುಮತಿ ಕೊಟ್ಟಿದೆ. ನನಗೆ ಒಂದು ಕಡೆ ಖುಷಿ ಇನ್ನೊಂದು ಕಡೆ ದುಃಖ ಆಗಿದೆ. ನ್ಯಾಯಾಲಯಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮತ ಹಾಕಲು ನನಗೆ ಅವಕಾಶ ಸಿಕ್ಕಿದೆ. ಕಾರ್ಯಕರ್ತರು ಮತ್ತು ಮಾಧ್ಯಮಗಳಿಗೆ ಧನ್ಯವಾದ ತಿಳಿಸುವೆ'' ಎಂದರು.

''ಸಹಜವಾಗಿ ನಾನು 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಸಾರ್ವಜನಿಕರಿಗೋಸ್ಕರ ಕೆಲಸ ಮಾಡಿದ್ದೇನೆ. ಕರ್ನಾಟಕದಲ್ಲಿ ನಾನು ಕ್ಷೇತ್ರಕ್ಕೆ ‌ಬರದೆ ಇದ್ದರೂ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ. ಮತದಾರರಿಗೆ ಅಭಿನಂದನೆ ಸಲ್ಲಿಸುವೆ. ನನಗೆ ಇವತ್ತು ಕೊಟ್ಟ ಅವಕಾಶ ಬಹಳ ಖುಷಿ ತಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಕಲು ಅವಕಾಶ ಕೊಟ್ಟಿದೆ. ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ಬಂದೆ. ಎಲ್ಲಿಯೂ ಭೇಟಿ ನೀಡಿಲ್ಲ. ಮತ ಹಾಕಿ ಬನ್ನಿ ಅಂತ ಅಷ್ಟೇ ಕೋರ್ಟ್ ಹೇಳಿದೆ. ಮತ ಚಲಾಯಿಸಿ ವಾಪಸ್ ಆಗುವೆ'' ಎಂದು ತಿಳಿಸಿದರು.

ಇದನ್ನೂ ಓದಿ :ವಿನಯ್ ಕುಲಕರ್ಣಿಗೆ ಮತ ಚಲಾವಣೆಗೆ ಧಾರವಾಡ ಪ್ರವೇಶಿಸಲು ಅವಕಾಶ ನೀಡಿದ ಹೈಕೋರ್ಟ್ - Vinay Kulkarni

ABOUT THE AUTHOR

...view details