ಮೈಸೂರು: ನನ್ನ ವಿರುದ್ಧ ನಗರಾಭಿವೃದ್ಧಿ ಸಚಿವರು ಮಾಡಿರುವ ಆರೋಪವನ್ನು ಏಳು ದಿನಗಳಲ್ಲಿ ದಾಖಲೆಗಳ ಮೂಲಕ ಸಾಬೀತು ಪಡಿಸಬೇಕು. ಇಲ್ಲದಿದ್ದರೇ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿಗಳ ಜತೆಗಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ನನ್ನ ವಿರುದ್ಧ ಆರೋಪ ಮಾಡುವ ಮುನ್ನ ಎಲ್ಲವನ್ನೂ ಸಮರ್ಪಕವಾಗಿ ಪರಿಶೀಲನೆ ಮಾಡಬೇಕಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಬೇಕಿತ್ತು. ಬಡಾವಣೆಗಳನ್ನು ಅಭಿವೃದ್ಧಿ ಮಾಡುವಲ್ಲಿ ಮುಡಾ ವಿಫಲವಾಗಿದೆ. ಸ್ಲಂಗಳನ್ನು ಸೃಷ್ಟಿಸಲು ಮುಡಾ ಹೊರಟಿದೆ. ಮುಡಾ ಬಡಾವಣೆಗಳ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಸಚಿವರು ಸತ್ಯಾಂಶ ಬಯಲು ಮಾಡಬೇಕು. ಏಳು ದಿನಗಳಲ್ಲಿ ದಾಖಲೆ ಸಮೇತ ಸಾಬೀತುಪಡಿಸಬೇಕು ಎಂದರು.
ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವರು ಉತ್ತರ ಕೊಡಬೇಕು. ಇಲ್ಲದಿದ್ದರೇ ನಾನೇ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನನ್ನ 50 - 60 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಟ್ಟಡ ಕಟ್ಟಲು ಆಗಿಲ್ಲ. ನನ್ನ ತಂದೆಯಿಂದ ಬಂದಿರುವ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು, ಜತೆಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಖರೀದಿ ಮಾಡಿರುವ ಜಮೀನು ಕಾನೂನು ಬದ್ಧವಾಗಿದೆ. ನನ್ನಂತ ರಾಜಕಾರಣಿ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.