ಶಾಸಕ ಆರಗ ಜ್ಞಾನೇಂದ್ರ (ETV Bharat) ಶಿವಮೊಗ್ಗ: ಪೆನ್ಡ್ರೈವ್ ಪ್ರಕರಣದ ಹಿಂದೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ. ಕೆ ಶಿವಕುಮಾರ್ ಇದ್ದಾರೆ ಎಂದು ಮಾಜಿ ಗೃಹ ಸಚಿವರು ಹಾಗೂ ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಪ್ರಕರಣದ ಕೃತ್ಯವನ್ನು ನಾನು ಖಂಡಿಸುತ್ತೇನೆ. ಅಪರಾಧ ಮಾಡಿದವರನ್ನು ಬಂಧಿಸಬೇಕು. ಇದಕ್ಕೆ ಎಸ್ಐಟಿ ರಚನೆ ಆಗಿದೆ. ಪೆನ್ಡ್ರೈವ್ ರೆಡಿ ಮಾಡಿ ಹೆಣ್ಮಕ್ಕಳನ್ನು ಬೀದಿಗೆ ತಂದವರನ್ನು ಸರ್ಕಾರ ಬಂಧಿಸುತ್ತಿಲ್ಲ ಎಂದರು.
ಪೆನ್ಡ್ರೈವ್ ಮಲೇಷ್ಯಾದಲ್ಲಿ ರೆಡಿಯಾಗಿವೆ ಎಂಬ ಮಾತಿದೆ. ಈ ಪ್ರಕರಣದಲ್ಲಿ ಸಿಎಂ, ಡಿಸಿಎಂ ಭಾಗಿಯಾಗಿದ್ದಾರೆ. ಇಂತಹ ಹೇಸಿಗೆ ಹೊರ ಬರಬೇಕಿದೆ. ಮುಖ್ಯವಾಗಿ ಇದರಲ್ಲಿ ಡಿಸಿಎಂ ಭಾಗಿಯಾಗಿದ್ದಾರೆ. ಇದರಲ್ಲಿ ಯಾರಿದ್ದಾರೆ ಎಂಬ ಅಂಶ ಹೊರಬರಬೇಕಿದೆ ಎಂದು ಹೇಳಿದರು.
ದೇವೇಗೌಡರ ಮನಸ್ಸನ್ನು ನೋಯಿಸುವುದು, ಇದು ಒಕ್ಕಲಿಗರ ನಾಯಕತ್ವಕ್ಕಾಗಿ ನಡೆಯುತ್ತಿರುವ ಕೃತ್ಯ ಎಂಬ ಅನುಮಾನ ಮೂಡಿದೆ. ಎಸ್ಐಟಿ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಅಂಶ ಸಣ್ಣ ಮಕ್ಕಳಿಗೂ ತಿಳಿದಿದೆ. ಇದನ್ನು ತಕ್ಷಣ ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವರು ಆಗ್ರಹಿಸಿದರು.
ಇದರ ಹಿಂದೆ ಸಿಎಂ - ಡಿಸಿಎಂ ಇದ್ದಾರೆ. ಒಂದು ಸಮುದಾಯಕ್ಕೆ ಅಪಮಾನ ಮಾಡಲಾಗುತ್ತಿದೆ. ಇದರ ಫಲವನ್ನು ಅವರು ಊಟ ಮಾಡಲೇಬೇಕು ಎಂದರು. ಸರ್ಕಾರದ ಒತ್ತಡದಲ್ಲಿ ಎಸ್ಐಟಿ ಇದೆ. ನಾಲ್ಕು ವರ್ಷಗಳ ಹಿಂದಿನ ಪೆನ್ಡ್ರೈವ್ ಇದೆ. ಇದನ್ನು ಈಗ ಏಕೆ ಹೊರ ತರಬೇಕಿತ್ತು. ಜೆಡಿಎಸ್ ಆಗ ಕಾಂಗ್ರೆಸ್ ಜೊತೆ ಇದ್ದಾಗ ಇದನ್ನು ಏಕೆ ಹೊರ ತರಬೇಕಿತ್ತು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ :ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಹೆಚ್.ಡಿ. ರೇವಣ್ಣ ಶಿಫ್ಟ್ - H D Revanna