ಹಾವೇರಿ : ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆಗಳ ಪ್ರಕರಣಗಳು ಅಧಿಕವಾಗುತ್ತಿವೆ. ಸರಿಯಾದ ಬೆಲೆ, ಸರಿಯಾದ ಇಳುವರಿ, ಸಮರ್ಪಕ ಗೊಬ್ಬರ, ಬಿತ್ತನೆ ಬೀಜ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅತಿಯಾದ ಮಳೆ, ಬರ ಸೇರಿದಂತೆ ಪ್ರಕೃತಿಯ ಹಲವು ವಿಕೋಪಗಳಿಂದ ಸಹ ರೈತರು ಸಾಲದ ಸುಳಿಗೆ ಸಿಲುಕಿ ನಲುಗುತ್ತಿದ್ದಾರೆ. ಆದರೆ ರೈತರು ಪರ್ಯಾಯ ಕೃಷಿಯಾದ ಮಿಶ್ರ ಬೇಸಾಯದ ಮೂಲಕ ಈ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು ಎನ್ನುತ್ತಿದೆ ಹಾವೇರಿಯ ಗ್ರೀನ್ಚಿಕ್ ರೈತರ ಉತ್ಪಾದಕರ ಕಂಪನಿ.
ಈ ಕಂಪನಿ ರೈತರಿಗೆ ಮಿಶ್ರ ಬೇಸಾಯವಾದ ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮತ್ತು ಹಸುಸಾಕಾಣಿಕೆ ಕುರಿತಂತೆ ತರಬೇತಿ ನೀಡುತ್ತಿದೆ. ಅಲ್ಲದೆ ತನ್ನ ಸದಸ್ಯರಿಗೆ ನಾಟಿ ಮತ್ತು ಬಿವಿ380 ತಳಿಯ ಕೋಳಿಗಳ ಸಾಕಾಣಿಕೆ ಬಗ್ಗೆ ಮಾಹಿತಿ ನೀಡುತ್ತೆ. ಸಾವಿರಕ್ಕೂ ಅಧಿಕ ಖಡಕನಾಥ್, ಬಿವಿ380, ಸ್ವರ್ಣದಾರಾ, ಕಾವೇರಿ, ಹಸೀಲ್ ಸೇರಿದಂತೆ ವಿವಿಧ ನಾಟಿ ತಳಿಯ ಕೋಳಿಗಳ ಸಾಕಾಣಿಕೆ ಮಾಡಿದೆ. ಈ ಕೋಳಿ ತಳಿಗಳ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದೆ.
ಸರ್ಕಾರಿ ಸ್ವಾಮ್ಯದ ಈ ಕಂಪನಿ ತಾನೇ ಕೋಳಿ ಮೊಟ್ಟೆಗಳಿಂದ ಮರಿಮಾಡಿ ರೈತರಿಗೆ ನೀಡುತ್ತಿದೆ. ಇದಕ್ಕಾಗಿ ಮೊಟ್ಟೆಗಳಿಂದ ಮರಿಮಾಡುವ ಹೈಟೆಕ್ನಾಲಜಿಯ ಇನ್ಕ್ಯುಬೇಟರ್ ತರಿಸಿದೆ. ಅಲ್ಲದೆ ಸಂಘದ ಸದಸ್ಯರೇ ಇನ್ಕ್ಯುಬೇಟರ್ ತಯಾರಿಸಿ ರೈತರಿಗೆ ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಈ ಕಂಪನಿಯಲ್ಲಿ ಸುಮಾರು 400 ರೈತರು ಸದಸ್ಯರಾಗಿದ್ದಾರೆ. ಕಂಪನಿ ತಾನು ಗಳಿಸುವ ಲಾಭವನ್ನು ಸದಸ್ಯರಿಗೆ ನೀಡುತ್ತಿದೆ. ಈ ಕಂಪನಿಯ ಸದಸ್ಯರು, ಆಡಳಿತ ಮಂಡಳಿ ಎಲ್ಲರೂ ರೈತರಾಗಿದ್ದಾರೆ. ರೈತರ ಶ್ರೇಯೋಭಿಲಾಷೆಗಾಗಿ ದುಡಿಯುತ್ತಿದ್ದಾರೆ. ಕಂಪನಿ ಸಹಕಾರದಿಂದ ಲಾಭದಲ್ಲಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆರವು ನೀಡುವಂತೆ ಮನವಿ ಮಾಡಿದೆ.
ಈ ಬಗ್ಗೆ ಕಂಪನಿ ಡೈರೆಕ್ಟರ್ ಕಲ್ಮೇಶ್ ಅವರು ಮಾತನಾಡಿ, 'ಮೊದಲು ನಾವು ಕೋಳಿ ಸಾಕಿದೆವು. ಕೋಳಿ, ಕುರಿ, ಎಮ್ಮೆ ಹೀಗೆ ನಾನಾ ರೀತಿಯ ಪ್ರಾಣಿಗಳಿಗೆ ಬೇಕಾದ ಆಹಾರವನ್ನು ಉತ್ಪಾದಿಸಿ ರೈತರಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಮಾರ್ಕೆಟ್ಗಿಂತ ಕಡಿಮೆ ದರದಲ್ಲಿ ನಾವು ಆಹಾರ ಉತ್ಪನ್ನಗಳನ್ನ ನೀಡುತ್ತಿದ್ದೇವೆ' ಎಂದರು.