ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಬೆಂಗಳೂರು:"ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಶೇ.5.6ರಷ್ಟು ಷೇರುಗಳು ಖಾಸಗಿಯವರ ಒಡೆತನದಲ್ಲಿದ್ದು ಅಷ್ಟೂ ಷೇರುಗಳನ್ನು ಸರ್ಕಾರವೇ ಖರೀದಿಸಿ ಸಂಸ್ಥೆಯನ್ನು ಶೇ. 100ರಷ್ಟು ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ" ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಜೆಡಿಎಸ್‌ನ ಎಸ್.ಎಲ್.ಬೋಜೇಗೌಡರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಮೈಸೂರು ಲ್ಯಾಂಪ್ಸ್‌ಗೆ ಸಂಬಂಧಿಸಿದಂತೆ ಸರ್ಕಾರ ಹೆಚ್ಚು ಜಾಗರೂಕತೆಯ ಹೆಜ್ಜೆಗಳನ್ನು ಇಡುತ್ತಿದೆ. ಅದರ ಆಸ್ತಿ ಯಾವುದೇ ಖಾಸಗಿ ವ್ಯಕ್ತಿ/ಸಂಸ್ಥೆಗಳ ಪಾಲಾಗಲು ಬಿಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಸದ್ಯ ಈ ಕಂಪನಿಯಲ್ಲಿ ಸರ್ಕಾರದ ಷೇರು ಪ್ರಮಾಣ ಶೇ.91.07ರಷ್ಟಿದೆ. ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಸಂಸ್ಥೆ ಶೇ.3.33ರಷ್ಟು ಷೇರು ಬಂಡವಾಳ ಹೊಂದಿದೆ. ಉಳಿದ ಶೇ.5.6ರಷ್ಟು ಷೇರು ಬಂಡವಾಳ ಸಾರ್ವಜನಿಕರದ್ದಾಗಿದೆ" ಎಂದು ವಿವರಿಸಿದರು.
"ಮೈಸೂರು ಲ್ಯಾಂಪ್ಸ್ ಮತ್ತು ಎನ್‌ಜಿಇಎಫ್ ಸಂಸ್ಥೆಗೆ ಸೇರಿದ ಜಾಗಗಳಲ್ಲಿ ಸಾರ್ವಜನಿಕ ಉದ್ದೇಶದ ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು 2021ರಲ್ಲಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಇವರಲ್ಲದೆ, ಸರ್ಕಾರದ ಕಡೆಯಿಂದ ಏಳು ಮತ್ತು ನಾಗರಿಕರ ವಲಯದಿಂದ ಐದು ಟ್ರಸ್ಟಿಗಳನ್ನು ನೇಮಿಸಲು ಅವಕಾಶವಿದೆ. ಇದುವರೆಗೂ ಈ ಟ್ರಸ್ಟ್‌ಗೆ ಯಾವುದೇ ಚಟುವಟಿಕೆಗಳನ್ನು ಸರ್ಕಾರದ ಕಡೆಯಿಂದ ವಹಿಸಿರುವುದಿಲ್ಲ" ಎಂದು ಮಾಹಿತಿ ನೀಡಿದರು.
"ಮೊದಲ ಆದ್ಯತೆ ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವುದು. ಅದರ ನಂತರವೇ ಅದರ ಅಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಖಾಸಗಿಯವರಿಗಂತೂ ಕೊಡುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
₹50 ಸಾವಿರ ಕೋಟಿ ಹೂಡಿಕೆ, 58 ಸಾವಿರ ಉದ್ಯೋಗ ಸೃಷ್ಟಿ:"2023-24ನೇ ಸಾಲಿನಲ್ಲಿ ಒಟ್ಟು 241 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹50,025 ಕೋಟಿ ಬಂಡವಾಳ ಹರಿದುಬಂದಿದೆ. ಇವುಗಳ ಮೂಲಕ 58,051 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ" ಎಂದು ಸಚಿವರು ಹೇಳಿದರು.
ಬಿಜೆಪಿ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, "ಏಕಗವಾಕ್ಷಿ ಅನುಮೋದನಾ ಸಮಿತಿಯು ಹಸಿರು ನಿಶಾನೆ ನೀಡಿರುವ ಈ ಯೋಜನೆಗಳ ಪೈಕಿ 24 ಯೋಜನೆಗಳು ಮಾತ್ರ ಬೆಂಗಳೂರು ಜಿಲ್ಲೆಯಲ್ಲಿದ್ದು, ಉಳಿದ 217 ಯೋಜನೆಗಳು ಹೊರಗಿನ ಜಿಲ್ಲೆಗಳಲ್ಲಿವೆ. ಬೆಂಗಳೂರು ಜಿಲ್ಲೆಯಲ್ಲಿ 21,537 ಕೋಟಿ ರೂ. ಹೂಡಿಕೆ ಆಗುತ್ತಿದ್ದು, 19,243 ಉದ್ಯೋಗ ಸೃಷ್ಟಿಯಾಗಲಿವೆ. ಉಳಿದ ಜಿಲ್ಲೆಗಳಲ್ಲಿ 28,488 ಕೋಟಿ ರೂ. ಬಂಡವಾಳ ಹೂಡಿಕೆ ಆಗುತ್ತಿದ್ದು, 38,808 ಮಂದಿಗೆ ಉದ್ಯೋಗ ಸಿಗಲಿವೆ" ಎಂದು ಅಂಕಿಅಂಶಗಳ ಸಮೇತ ಸಚಿವರು ವಿವರಿಸಿದರು.
"ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ ಮಿಕ್ಕ ಭಾಗಗಳಲ್ಲಿ ಉದ್ದಿಮೆಗಳು ನೆಲೆಯೂರಿ ಉದ್ಯೋಗ ಸೃಷ್ಟಿಯಾಗುವಂತೆ ಮಾಡಲು ಸರ್ಕಾರವು ಬಿಯಾಂಡ್ ಬೆಂಗಳೂರು ಉಪಕ್ರಮವನ್ನು ಆರಂಭಿಸಿದ್ದು, ವಿವಿಧೆಡೆಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಕೈಗಾರಿಕಾ ನೀತಿಯಲ್ಲಿ ಹಲವು ಪ್ರೋತ್ಸಾಹಧನ ಮತ್ತು ವಿನಾಯಿತಿಗಳನ್ನು ನೀಡಲಾಗುತ್ತಿದೆ" ಎಂದು ಸಚಿವರು ಹೇಳಿದ್ದಾರೆ.
ಸಾಲ ಪಡೆದಾದರೂ ಮೈಸೂರು ಸಕ್ಕರೆ ಕಾರ್ಖಾನೆ ಉನ್ನತೀಕರಣ:"ಮೈಸೂರು ಸಕ್ಕರೆ ಕಾರ್ಖಾನೆ ಉನ್ನತೀಕರಣಕ್ಕೆ ಬಜೆಟ್ನಲ್ಲಿ ಅನುದಾನ ಪ್ರಕಟಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯರ ವಿವೇಚನೆಗೆ ಬಿಟ್ಟದ್ದಾಗಿದೆ. ಬ್ಯಾಂಕ್ನಿಂದ ಸಾಲದ ವ್ಯವಸ್ಥೆ ಪಡೆದಾದರೂ ನಾವು ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಮಾಡುತ್ತೇವೆ" ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಪರಿಷತ್ ಪ್ರಶ್ನೋತರ ಕಲಾಪದಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಇತಿಹಾಸದಲ್ಲಿ ಮೊದಲ ಬಾರಿಗೆ ಮೈಸೂರು ಕಾರ್ಖಾನೆಯಿಂದ ಇಷ್ಟು ಪ್ರಮಾಣದಲ್ಲಿ ಕಬ್ಬು ಅರೆಯಲಾಗಿದೆ. 2023-24ರಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. 70 ಕೋಟಿ ಹಣ ಕಬ್ಬು ಅರೆದಿದ್ದರಿಂದ ಬಂದಿತ್ತು. ಎಲ್ಲಾ ರೈತರಿಗೆ ಹಣ ಪಾವತಿ ಮಾಡಲಾಗಿದೆ. 2023-24ರಲ್ಲಿ 15,570 ಕಾಕಂಬಿ ಉತ್ಪಾದನೆಯಾಗಿದ್ದು, 18,74,22,554 ಆದಾಯ ಬಂದಿದೆ. ಆಡಳಿತಾತ್ಮಕವಾಗಿ ಏನಾದರೂ ಲೋಪ ಇದ್ದರೆ ಸರಿ ಮಾಡುತ್ತೇವೆ. ಎಂಡಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ತಾರೆ. ಕಾರ್ಖಾನೆ ಉನ್ನತೀಕರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಬಜೆಟ್ನಲ್ಲಿ 200 ಕೋಟಿ ಕೊಡೋದು ಸಿಎಂ ಅವರು ನಿರ್ಧಾರ ಮಾಡುತ್ತಾರೆ. ಆದರೂ ಕಾರ್ಖಾನೆ ಉನ್ನತೀಕರಣಕ್ಕೆ ಸಾಲದ ವ್ಯವಸ್ಥೆ ಮಾಡಿಯಾದರೂ ಕ್ರಮ ತೆಗೆದುಕೊಳ್ಳುತ್ತೇವೆ" ಎಂದರು.
ಇದನ್ನೂ ಓದಿ:ರಾಜ್ಯದ ಕಾನೂನು ಸುವ್ಯವಸ್ಥೆ ಸದನದಲ್ಲಿ ಚರ್ಚೆ: ವಿಧಾನಸಭೆಯಲ್ಲಿ ಆಡಳಿತ- ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ