ಕರ್ನಾಟಕ

karnataka

ETV Bharat / state

ಶಾಲೆಗಳಲ್ಲಿ ದ್ವಿ ಭಾಷಾ ವಿಭಾಗ ಕಾಲಮಿತಿಯಲ್ಲಿ ಆರಂಭ : ಸಚಿವ ಮಧುಬಂಗಾರಪ್ಪ

ಶಾಲೆಗಳಲ್ಲಿ ದ್ವಿ ಭಾಷಾ ವಿಭಾಗವನ್ನು ಕಾಲಮಿತಿಯಲ್ಲಿ ಆರಂಭಿಸಲಾಗುವುದು ಎಂದು ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸಚಿವ ಮಧುಬಂಗಾರಪ್ಪ
ಸಚಿವ ಮಧುಬಂಗಾರಪ್ಪ

By ETV Bharat Karnataka Team

Published : Feb 15, 2024, 6:41 PM IST

ಬೆಂಗಳೂರು :ರಾಜ್ಯದಲ್ಲಿರುವ ಶಾಲೆಗಳಲ್ಲಿ ದ್ವಿ-ಭಾಷಾ ವಿಭಾಗಗಳನ್ನು ಕಾಲಮಿತಿಯಲ್ಲಿ ಆರಂಭಿಸಲು ಸರ್ಕಾರ ಉದ್ದೇಶಿಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆ ಶಾಸಕ ಆರಗ ಜ್ಞಾನೇಂದ್ರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಬೇಡಿಕೆ ಇದೆ. ಪೋಷಕರಿಗೆ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸಬೇಕೆಂಬ ಆಸಕ್ತಿ ಇದೆ. ಇದು ಕೂಡ ನಮ್ಮ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಎಂಬುದು ಗೊತ್ತಾಗಿದೆ. ಶಾಲೆಗಳಲ್ಲಿ ದ್ವಿ-ಭಾಷಾ ವಿಭಾಗಗಳನ್ನು ಹಂತಹಂತವಾಗಿ ಪ್ರಾರಂಭಿಸಲಾಗುವುದು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 30 ದ್ವಿ-ಭಾಷಾ ವಿಭಾಗ ಮತ್ತು 2020-21ನೇ ಸಾಲಿನಲ್ಲಿ 59 ದ್ವಿ-ಭಾಷಾ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಈ ಪೈಕಿ ತೀರ್ಥಹಳ್ಳಿ ಕ್ಷೇತ್ರದಲ್ಲಿ 15 ದ್ವಿ-ಭಾಷಾ ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ದ್ವಿ-ಭಾಷಾ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರುಗಳಿಗೆ ಕಾಲಕಾಲಕ್ಕೆ ಅಗತ್ಯತೆಯನುಸಾರ ಇಎಂಟಿಐಪಿ ತರಬೇತಿ ನೀಡುವುದರ ಮೂಲಕ ಸದೃಢಗೊಳಿಸಲಾಗುತ್ತಿದೆ. ಈ ಮೂಲಕ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಹೆಚ್ಚುವರಿ ಅನುದಾನಕ್ಕೆ ಆಗ್ರಹ : ರಾಜ್ಯದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಗಳ ಕೊಠಡಿ ದುರಸ್ತಿಗೆ ಹೆಚ್ಚುವರಿ ಅನುದಾನ ಪಡೆದುಕೊಳ್ಳುವಂತೆ ಶಾಸಕ ಪಿ. ಎಂ ನರೇಂದ್ರ ಸ್ವಾಮಿ ಆಗ್ರಹಿಸಿದರು. ವಿಧಾನಸಭೆಯ ಪ್ರಶ್ನೋತ್ತರದ ವೇಳೆ ಮಾತನಾಡಿದ ಅವರು, 2020 ರಿಂದ 2023ರ ವರೆಗೂ ನೀಡಲಾಗಿರುವ ಅನುದಾನ ಅತ್ಯಂತ ಕಡಿಮೆಯಿದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಬಜೆಟ್​ನಲ್ಲಿ ಹೆಚ್ಚು ಅನುದಾನ ಪಡೆದುಕೊಳ್ಳಲು ಸಚಿವರು ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಬೇಕು ಎಂದರು.

ರಾಜ್ಯಾದ್ಯಂತ ಕೊಠಡಿ ದುರಸ್ತಿಗೆ 40 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದು, ಇದು ಸಾಲುವುದಿಲ್ಲ. ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 180 ಕೋಟಿ ರೂ.ಗಳ ಅವಶ್ಯಕತೆ ಇದೆ. ಅದೂ ಕೂಡ ಸರಿಯಾಗಿ ಹಂಚಿಕೆಯಾಗಿಲ್ಲ ಎಂದು ಆಕ್ಷೇಪಿಸಿದರು. ಜೊತೆಗೆ ಹಿಂದಿನ ಸರ್ಕಾರ ಅನುದಾನ ಹಂಚಿಕೆಯಲ್ಲೂ ತಾರತಮ್ಯ ಮಾಡಿದೆ ಎಂದು ಆರೋಪಿಸಿದರು. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ತಮ್ಮ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ ಎಂದು ಬಿಜೆಪಿ ಶಾಸಕರು ಸಮರ್ಥಿಸಿಕೊಂಡರು.

ಕಾಂಗ್ರೆಸ್​ನ ಅನೇಕ ಶಾಸಕರು ಬಿಜೆಪಿ ಸರ್ಕಾರದ ಬಜೆಟ್​ನಲ್ಲಿ ಅನ್ಯಾಯವಾಗಿದೆ ಎಂದರು. ಇದಕ್ಕೆ ಉತ್ತರ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಶಾಲಾ ಕೊಠಡಿಗಳ ದುರಸ್ತಿ, ಮರು ನಿರ್ಮಾಣ, ಮೂಲ ಸೌಲಭ್ಯ ಅಭಿವೃದ್ಧಿಗೆ ಕಳೆದ 3 ವರ್ಷಗಳಲ್ಲಿ 90,312 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 7,080 ಶಾಲೆಗಳ ಪೈಕಿ 9,604 ಕೊಠಡಿಗಳಿಗೆ 1,29,768 ಲಕ್ಷ ರೂ.ಗಳು ನಿಗದಿಯಾಗಿದೆ. ಇದರಲ್ಲಿ ಕೊಠಡಿ ದುರಸ್ತಿಗಾಗಿಯೇ 17,648 ಲಕ್ಷ ರೂ. ನಿಗದಿಯಾಗಿದ್ದು, 15,413 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಮೊಸಳೆ ಪಾರ್ಕ್ ನಿರ್ಮಾಣದ ಬಗ್ಗೆ ಚರ್ಚಿಸಿ ತೀರ್ಮಾನ: ರಾಯಚೂರು ಜಿಲ್ಲೆಯ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಮೊಸಳೆ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಅವರ ಪ್ರಶ್ನೆಗೆ ಉತ್ತರಿಸಿದರು.

ಕೃಷ್ಣಾ ನದಿ ತೀರದಲ್ಲಿ ಮೊಸಳೆ ಹಾವಳಿಯಿಂದಾಗಿ ಬಹಳಷ್ಟು ಸಾವು-ನೋವುಗಳು ಸಂಭವಿಸಿವೆ ಎಂಬುದನ್ನು ಸದನದಲ್ಲಿ ಅವರು ಒಪ್ಪಿಕೊಂಡರು. ಕೃಷ್ಣಾನದಿ ತೀರದಲ್ಲಿ ಮೊಸಳೆ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮೊಸಳೆ ಕುರಿತ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಲಾಗಿದೆ. ಕೃಷ್ಣಾ ನದಿತೀರದಲ್ಲಿ ಅಧಿಕ ಸಂಖ್ಯೆಯಲ್ಲಿರುವ ತೀರ್ಥಕ್ಷೇತ್ರಗಳೆಡೆ ನದಿತೀರದಲ್ಲಿ ಕಬ್ಬಿಣದ ಸರಪಳಿ ಮತ್ತು ಬೇಲಿಗಳನ್ನು ಅಳವಡಿಸಿರುವುದು ಸೇರಿದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.

ಇದನ್ನೂ ಓದಿ:ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡಲ್ಲ: ಸಚಿವ ಮಧು ಬಂಗಾರಪ್ಪ

ABOUT THE AUTHOR

...view details