ಉಡುಪಿ : ಶೋಭಾ ಕರಂದ್ಲಾಜೆ ಯಾವಾಗಲೂ ಉರಿವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಯಾವಾಗಲೂ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಉಡುಪಿಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ದಾಖಲೆ ಸುಟ್ಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪ ವಿಚಾರವಾಗಿ ಮಾತನಾಡಿದರು. ಶೋಭಾ ಕರಂದ್ಲಾಜೆ ಬಗ್ಗೆ ಮಹಿಳೆಯಾಗಿ ವೈಯಕ್ತಿಕ ಗೌರವ ಇದೆ. ಶೋಭಾ ಯಾವಾಗಲೂ ಉರಿವ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಮುಡಾ ಮೇಲೆ ರಾಜಕೀಯ ಪ್ರೇರಿತ ಇಡಿ ರೈಡ್ ನಡೆಯುತ್ತಿದೆ. ರಾಜಭವನ, ರಾಜ್ಯಪಾಲರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿದರು (ETV Bharat) ಕರಾವಳಿಗೆ ಅನ್ಯಾಯ :ಕಾಂಗ್ರೆಸ್ನಿಂದ ಬಿಡಿಗಾಸು ಅನುದಾನ ಇಲ್ಲ ಎಂದು ಬಿಜೆಪಿಯಿಂದ ದೂರುಗಳು ಕೇಳಿಬರುತ್ತಿವೆ. ಕೇಂದ್ರದಿಂದಾಗುವ ಅನ್ಯಾಯದ ಬಗ್ಗೆ ಧ್ವನಿಯೆತ್ತಿಲ್ಲ ಯಾಕೆ? ರಾಜ್ಯದ ಬಿಜೆಪಿ ಸಂಸದರು ಏನು ಮಾಡ್ತಿದ್ದಾರೆ?, ತಲೆ ಇಲ್ವಾ? ದಾರಿ ತಪ್ಪಿಸಿ ಗೂಬೆ ಕೂರಿಸೋ ಕೆಲಸ ಬಿಡಿ. ಬಿಜೆಪಿಗೆ ಆಪಾದನೆ ಮಾಡೋದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಹರಿಹಾಯ್ದರು.
ದಕ್ಷಿಣ ಕನ್ನಡ ಸ್ಥಳೀಯಾಡಳಿತ ಉಪ ಚುನಾವಣೆಯ ಬಗ್ಗೆ ಮಾತನಾಡಿ, ನಮ್ಮ ಅಭ್ಯರ್ಥಿ ರಾಜು ಪೂಜಾರಿ ಪರ ಕೊನೆಯ ಹಂತದ ಪ್ರಚಾರ ತಯಾರಿ ನಡೆಯುತ್ತಿದೆ. ಪಕ್ಷ ಗಟ್ಟಿಯಾಗಲು ಕಾಂಗ್ರೆಸ್ಗೆ ಗೆಲ್ಲುವ ಅಗತ್ಯ ಇದೆ. ನಮ್ಮ ಅಭ್ಯರ್ಥಿ ಗೆಲ್ಲುವ ಎಲ್ಲಾ ತಯಾರಿ ಮಾಡಿದ್ದೇವೆ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು.
ಬಿಜೆಪಿ ಓವರ್ ಕಾನ್ಫಿಡೆನ್ಸ್, ಮಾತ್ರವಲ್ಲದೆ ಅದು ಊಹಿಸೋದೇ ಬೇರೆ, ಆಗೋದೇ ಬೇರೆ. ಓವರ್ ಕಾನ್ಫಿಡೆನ್ಸ್ ನಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ನಮಗೆ ಗ್ಯಾರಂಟಿ ಮೇಲೆ ಭರವಸೆ ಇದೆ, ಗೆಲ್ಲುತ್ತೇವೆ. ಪಂಚಾಯತ್ಗೆ ಶಕ್ತಿ ತಂದುಕೊಟ್ಟಿದ್ದೇ ಕಾಂಗ್ರೆಸ್ ನವರು. ಉದ್ಯೋಗ ಖಾತ್ರಿ, ನರೇಗಾದಂತಹ ಹತ್ತಾರು ಯೋಜನೆ ಜಾರಿಗೆ ತರಲಾಗಿದೆ. ಪಂಚಾಯತ್ನ ಪರಿಕಲ್ಪನೆಯೇ ಕಾಂಗ್ರೆಸ್ನದ್ದು ಎಂದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಸುದೀರ್ಘ ಚರ್ಚೆಯಾಗಿದೆ : ಕಸ್ತೂರಿ ರಂಗನ್ ವರದಿ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಸುದೀರ್ಘವಾದ ಚರ್ಚೆಯಾಗಿದೆ. ಈಗ ಭರವಸೆ ಕೊಡಲ್ಲ, ನೀತಿ ಸಂಹಿತೆ ಇದೆ. ಅರಣ್ಯಮಂತ್ರಿ ಖಂಡ್ರೆಯವರ ಜೊತೆ ಚರ್ಚೆ ಮಾಡಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದರು.
ಇಡಿಯವರು ತಮ್ಮ ಪರಿಮಿತಿಯನ್ನ ಮೀರಿ ರೈಡ್ ಮಾಡುತ್ತಿದ್ದಾರೆ :ಇಡಿಯವರು ತಮ್ಮ ಪರಿಮಿತಿಯನ್ನು ಮೀರಿ ರೈಡ್ ಮಾಡುತ್ತಿದ್ದಾರೆ. ಇಡಿ ಅವರಲ್ಲಿ ಅತ್ಯುತ್ಸಾಹ ಕಾಣುತ್ತಿದೆ. ಇದು ಇಡಿಯವರ ದ್ವೇಷದ ಕ್ರಮ. ರಾಜಕೀಯ ಪ್ರೇರಿತ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪ ಮಾಡಿದ್ದಾರೆ.
ಉಡುಪಿಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಅವರು, ಕಾರ್ಯಕರ್ತರ ಜೊತೆ ಸಭೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಡಾ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುತ್ತಿದೆ. ನ್ಯಾಯಾಲಯದ ಆದೇಶದಂತೆ ತನಿಖೆ ನಡೆಯುತ್ತಿದೆ. ಹಾಗಾದರೆ ಇಡಿ ಅವರಿಗೆ ಅಲ್ಲಿ ಏನು ಕೆಲಸ? ಎಂದು ಪ್ರಶ್ನಿಸಿದರು. ಇಡಿಯವರು ತಮ್ಮ ಕಾಯ್ದೆಯನ್ನು ಮೀರಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ರಾಜ್ಯ ಸರ್ಕಾರದ ಹೆಸರು ಕೆಡಿಸಲು ಈ ರೀತಿ ಮಾಡಲು ಬಿಜೆಪಿ ಪ್ರೇರಣೆ ನೀಡಿದೆ ಎಂದು ಹೇಳಿದರು.
ಶೋಭಾ ಕರಂದ್ಲಾಜೆಗೆ ಮಾಹಿತಿಯ ಕೊರತೆ ಇದೆ :ಮುಡಾ ಹಗರಣದ ಫೈಲ್ಗಳನ್ನು ಸುಟ್ಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪ ವಿಚಾರವಾಗಿ ಮಾತನಾಡಿ, ಕುಣಿಯಲು ಆಗದವನು ಅಂಗಳ ಸರಿಯಿಲ್ಲ ಎಂದರಂತೆ. ಶೋಭಾ ಕರಂದ್ಲಾಜೆಗೆ ಮಾಹಿತಿಯ ಕೊರತೆ ಇದೆ. ನೀವು ಏಕೆ ಹಿಟ್ ಅಂಡ್ ರನ್ ಮಾಡುತ್ತೀರಿ. ಎಲ್ಲಾ ವಿಚಾರಗಳಿಗೂ ನಮ್ಮಲ್ಲಿ ದಾಖಲೆಗಳು ಇವೆ. ಮೂರು- ನಾಲ್ಕು ಏಜೆನ್ಸಿಗಳಲ್ಲಿ ಈ ಎಲ್ಲ ವಿಚಾರ ಚರ್ಚೆ ಆಗಿದೆ. ದಾಖಲೆ ಸಾಗಿಸಿದ್ದಾರೆ ಅನ್ನೋದೇ ಸುಳ್ಳು. ಯಾವುದಾದರೂ ಒಂದು ಸಾಕ್ಷಿ ತೋರಿಸಲಿ ಎಂದು ಬೈರತಿ ಹೇಳಿದ್ದಾರೆ. ನಾನು ಪ್ರಮಾಣ ಮಾಡಲು ತಯಾರಿದ್ದೇನೆ ಎಂದು ಬೈರತಿ ಹೇಳಿದ್ದಾರೆ. ತಾಕತ್ತಿದ್ದರೆ ಆ ಸವಾಲಿಗೆ ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ :ಗೃಹಲಕ್ಷ್ಮಿ ಹಣದಿಂದ ಗ್ರಂಥಾಲಯ ನಿರ್ಮಿಸಿದ ಮಹಿಳೆಗೆ ಪುಸ್ತಕ ನೀಡಿ ಶ್ಲಾಘಿಸಿದ ಲಕ್ಷ್ಮೀ ಹೆಬ್ಬಾಳ್ಕರ್