ಕರ್ನಾಟಕ

karnataka

ರಾಜ್ಯದಲ್ಲಿ ಆ.14ರಿಂದ 20 ರವರೆಗೆ ಭಾರೀ ಮಳೆಯಾಗಲಿದೆ: ಸಚಿವ ಕೃಷ್ಣ ಬೈರೇಗೌಡ - Krishnabyre Gowda

By ETV Bharat Karnataka Team

Published : Aug 12, 2024, 11:00 PM IST

ರಾಜ್ಯದಲ್ಲಿ ಆಗಸ್ಟ್​ 14ರಿಂದ 20ರ ವರೆಗೆ ಭಾರೀ ಮಳೆಯಾಗುವುದರಿಂದ ಕಠಿಣ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

minister-krishna-byre-gowda
ಸಚಿವ ಕೃಷ್ಣ ಬೈರೇಗೌಡ (ETV Bharat)

ಬೆಂಗಳೂರು:ರಾಜ್ಯದಲ್ಲಿ ಆ.14ರಿಂದ 20ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುಡ್ಡದ ಅಂಚಿನ, ಶಿಥಿಲಾವಸ್ಥೆಯ ಮನೆಗಳನ್ನು ಗುರುತಿಸಿ ವಾಸಕ್ಕೆ ತಾತ್ಕಾಲಿಕ ನಿರ್ಬಂಧ, ಶಾಲೆ ಕೊಠಡಿಗಳು ದುಃಸ್ಥಿತಿಯಲ್ಲಿದ್ದರೆ ಬಳಕೆ ಮಾಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದರು.

ಅಣೆಕಟ್ಟೆಗಳಿಗೆ ಒಳಹರಿವು ಹೆಚ್ಚಾದ ಮೇಲೆ ಹೊರ ಹರಿವು ಹೆಚ್ಚಿಸುವ ಬದಲು, ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣದ ಹೊರ ಹರಿವು ಕ್ರಮೇಣ ಹೆಚ್ಚಿಸಬೇಕು. ಇದರಿಂದ ಜಲಾಶಯಗಳ ಕೆಳಗಿನ ನದಿ ದಂಡೆಯ ಸಮೀಪದ ಜನವಸತಿ ಪ್ರದೇಶಗಳಿಗೆ ತೊಂದರೆ ತಪ್ಪಲಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಸಭೆ ಬುಧವಾರ ನಡೆಯಲಿದೆ ಎಂದರು.

ಸೆಪ್ಟಂಬರ್‌ನಿಂದ ಪೋಡಿ ದುರಸ್ತಿ: ಬಗರ್‌ಹುಕುಂ ದರಕಾಸ್ತ್‌ನಡಿ ಮಂಜೂರು ಜಮೀನಿಗೆ ಹಕ್ಕುಪತ್ರ ಕೋರಿದ ಲಕ್ಷಾಂತರ ಅರ್ಜಿಗಳು ಬಾಕಿಯಿವೆ. ಸೂಕ್ತ ದಾಖಲೆಗಳ ಅಲಭ್ಯತೆ, ವಿಸ್ತೀರ್ಣಕ್ಕಿಂತ ಹೆಚ್ಚು ಜಮೀನು ಮಂಜೂರು ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಕಾಣದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಪೋಡಿ ದುರಸ್ತಿ ಮಾಡಿಕೊಡುವ ಜವಾಬ್ದಾರಿ ಹೊತ್ತಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಿ ತಾಲೂಕುವಾರು ಡಿಜಿಟಿಲೀಕರಣ ಮಾಡಬೇಕೆಂದಿದೆ ಎಂದರು.

ಸದ್ಯಕ್ಕೆ ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ನಿರೀಕ್ಷಿತ ಫಲಿತಾಂಶ ಬಂದಿರುವ ಕಾರಣ ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ನಮೂನೆ ಒಂದರಿಂದ 5ನ್ನು ಮಾಡುತ್ತೇವೆ. ದಾಖಲೆಗಳು ಸರಿಯಿರುವುದಕ್ಕೆ ಸಮೀಕ್ಷೆ ಮಾಡಿಸಿ ಜಮೀನಿನ ಹಕ್ಕುಪತ್ರ ನೀಡಲಾಗುತ್ತದೆ. ಉಳಿದವಕ್ಕೆ ಕಾಯ್ದೆ ರೀತಿಯ ಕ್ರಮವಾಗಲಿದೆ ಎಂದು ಹೇಳಿದರು.

2.68 ಕೋಟಿ ಆಧಾರ್ ಜೋಡಣೆ: ಈಗಾಗಲೇ 2.68 ಕೋಟಿ ರೈತರ ಆಧಾರ್‌ ಸೀಡಿಂಗ್‌ ಕೆಲಸ ಮುಕ್ತಾಯವಾಗಿದ್ದು, ಆಗಸ್ಟ್‌ ತಿಂಗಳಾಂತ್ಯದೊಳಗಾಗಿ ಆಧಾರ್ ಸೀಡಿಂಗ್‌ ಕೆಲಸವನ್ನು ಸಂಪೂರ್ಣಗೊಳಿಸಲಾಗುವುದು. ರಾಜ್ಯಾದ್ಯಂತ 4.8 ಕೋಟಿ ಜಮೀನಿನ ಮಾಲಿಕತ್ವ ಇದೆ. ಈವರೆಗೆ 2.68 ಕೋಟಿ ರೈತರನ್ನು ಖುದ್ದು ಭೇಟಿ ಮಾಡಿ ಆಧಾರ್‌ ಜೊತೆಗೆ ಆರ್‌ಟಿಸಿ ಲಿಂಕ್‌ ಮಾಡಲಾಗಿದೆ ಎಂದರು.

ಆಧಾರ್‌ ಸೀಡಿಂಗ್​​ನಿಂದಾಗಿ ಸರ್ಕಾರಕ್ಕೆ ಸಾಕಷ್ಟು ಅಂಕಿ ಅಂಶಗಳು ಸಿಗುತ್ತಿದೆ. 36.53 ಲಕ್ಷ ಜಮೀನುಗಳಲ್ಲಿ ವ್ಯಕ್ತಿ ತೀರಿ ಹೋಗಿದ್ರೂ ಪಹಣಿಯಲ್ಲಿ ಅವರ ಹೆಸರೇ ಉಲ್ಲೇಖವಾಗಿರುವುದು ಆಧಾರ್‌ ಸೀಡಿಂಗ್‌ನಿಂದ ತಿಳಿದುಬಂದಿದೆ. ಹೀಗಾಗಿ ಎರಡು ತಿಂಗಳ ನಂತರ ಅಧಾಲತ್‌ ಮೂಲಕ ಫೌತಿಖಾತೆ ಅಭಿಯಾನ ಆರಂಭಿಸುವ ಚಿಂತನೆ ಇದೆ. ಜಮೀನಿಗೆ ಆಧಾರ್‌ ಲಿಂಕ್‌ ಮಾಡುವಾಗ 2.20 ಲಕ್ಷ ಜಮೀನು ಸರ್ಕಾರಿ ಭೂಮಿ ಎಂದು ಗುರುತಿಸದ ಭೂಮಿ ಇವೆ ಎಂದು ತಿಳಿದುಬಂದಿದೆ. ಆಧಾರ್‌ ಸೀಡಿಂಗ್‌ ಮುಗಿಯುವುದರ ಒಳಗಾಗಿ 3ರಿಂದ 3.50 ಲಕ್ಷ ಹೆಚ್ಚುವರಿ ಸರ್ಕಾರಿ ಭೂಮಿ ಲೆಕ್ಕಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಲ್ಯಾಂಡ್ ಬೀಟ್ ಆ್ಯಪ್‌ನಡಿ ಕಂದಾಯ, ಅರಣ್ಯ, ಶಿಕ್ಷಣ ಸೇರಿ 15 ಇಲಾಖೆಗಳಿಗೆ ಸೇರಿದ 14.14 ಲಕ್ಷ ಸರ್ವೇ ನಂಬರ್‌ಗಳ 1.40 ಕೋಟಿ ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. 13.04 ಲಕ್ಷ ನಂಬರ್‌ಗಳಿಗೆ ಸ್ಥಳಕ್ಕೆ ಭೇಟಿ ಕಾರ್ಯ ಮುಗಿದಿದ್ದು, ಒತ್ತುವರಿ ಪತ್ತೆ, ಸೆಪ್ಟೆಂಬರ್ ನಂತರ ತೆರವಿಗೂ ಕ್ರಮವಹಿಸಲಾಗುವುದು ತಿಳಿಸಿದರು.

ಅತಿವೃಷ್ಟಿಗೆ 58 ಮಂದಿ ಸಾವು: ಈ ಬಾರಿ ವಾಡಿಕೆಗಿಂತ ಸರಾಸರಿ ಶೇ. 26ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ ವಾಡಿಕೆ ಪ್ರಕಾರ ಈವರೆಗೆ 553 ಮಿಲಿ ಮೀಟರ್ ಮಳೆಯಾಗಬೇಕಿದ್ದರಲ್ಲಿ, ಸರಾಸರಿ 699ರಷ್ಟು ಮಿ. ಮೀ ಮಳೆಯಾಗಿದೆ ಎಂದರು.

ದಕ್ಷಿಣ ಒಳನಾಡು ವಾಡಿಕೆ 171, ವಾಸ್ತವಿಕ- 246, ಉತ್ತರ ಒಳನಾಡು ವಾಡಿಕೆ- 260 ವಾಸ್ತವಿಕ- 322, ಮಲೆನಾಡು- ವಾಡಿಕೆ- 1127, ವಾಸ್ತವಿಕ- 1361, ಕರಾವಳಿ ವಾಡಿಕೆ- 2299, ವಾಸ್ತವಿಕ 2947 ಮಿ.ಮೀ. ಮಳೆಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಶೇ.5ರಷ್ಟು ಮಳೆ ಕಡಿಮೆಯಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿತ್ತು. ಆದರೆ ಕಳೆದ 10 ದಿನಗಳಲ್ಲಿ ಸುಧಾರಿಸಿದ ಮಳೆಯು ಕೊರತೆ ಸರಿದೂಗಿಸಿದೆ ಎಂದು ಹೇಳಿದರು.

ಅತಿವೃಷ್ಟಿಗೆ ಈ ಬಾರಿ 58 ಮಂದಿ ಸಾವಿಗೀಡಾಗಿದ್ದಾರೆ. ಆಹಾರ ಧಾನ್ಯ, ತೋಟಗಾರಿಕೆ ಸೇರಿ 80 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ವಾರದೊಳಗೆ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು. ಮೃತರ ಕುಟುಂಬಗಳಿಗೆ ಒಟ್ಟು 3.04 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ. 1126 ಪೂರ್ಣ ಬಿದ್ದ ಮನೆಗಳು, ಅನಧಿಕೃತ 98, ದೊಡ್ಡ ಹಾನಿ 1176, ಭಾಗಶಃ ಹಾನಿ 2338, 2,377 ಮನೆಗಳು ಅಲ್ಪ ಹಾನಿಯಾಗಿವೆ.

ಪೂರ್ಣ ಬಿದ್ದ 768 ಮನೆಗಳಿಗೆ ತಲಾ 1.20 ಲಕ್ಷ ರೂ. ನಂತೆ 9.21 ಕೋಟಿ ರೂ. ಪರಿಹಾರ ಪಾವತಿ ಮಾಡಲಾಗುವುದು. ಭಾಗಶಃ ಬಿದ್ದ 2,800 ಮನೆಗಳಿಗೆ ಒಟ್ಟು 78 ಲಕ್ಷ ರೂ. ದಿನಬಳಕೆ ವಸ್ತುಗಳ ನೆರವಿಗೆ 1.40 ಕೋಟಿ ರೂ ಪರಿಹಾರ ವಿತರಿಸಲಾಗುತ್ತಿದೆ. ಬಲಿಯಾದ 151 ದೊಡ್ಡ ಜಾನುವಾರು, 137 ಚಿಕ್ಕ ಜಾನುವಾರುಗಳಿಗೆ ಸೇರಿ ಒಟ್ಟು 52.98 ಲಕ್ಷ ರೂ. ಪರಿಹಾರ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಡಿಕೆಶಿ ಭೇಟಿ: ತ್ಯಾಜ್ಯ ತೆರವು, ಒಳಚರಂಡಿ, ರಸ್ತೆಬದಿ ಚರಂಡಿ ಸ್ವಚ್ಛತೆಗೆ ಸೂಚನೆ - D K Shivaklumar City Rounds

ABOUT THE AUTHOR

...view details