ಬೆಂಗಳೂರು: "ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ" ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯವನ್ನು ನಿಂದಿಸಿ, ಅವಹೇಳನಕಾರಿ ಪೋಸ್ಟ್ ಹಾಕಿದ್ದ. ಈತನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ" ಎಂದರು.
"ಈ ವ್ಯಕ್ತಿಯನ್ನು ತಮ್ಮ ವಶಕ್ಕೆ ನೀಡಿ ನಾವು ಆತನಿಗೆ ಬುದ್ಧಿ ಕಲಿಸುತ್ತೇವೆ ಎಂದು ಒಂದು ಸಮುದಾಯದ ಜನರು ಉದಯಗಿರಿ ಪೊಲೀಸ್ ಠಾಣೆ ಮುಂದೆ ಗಲಾಟೆ ನಡೆಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಲಾಟೆ ನಡೆಸಿ ಕಲ್ಲು ತೂರಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಘಟನಾ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿಯವರನ್ನು ಕಳುಹಿಸಿದ್ದೇನೆ. ಅವರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಹಾಗೆಯೇ ಟಿ. ನರಸೀಪುರದಲ್ಲಿ ನಡೆದಿರುವ ಕುಂಭಮೇಳದ ಭದ್ರತೆಯನ್ನು ಅವರು ಪರಿಶೀಲಿಸಲಿದ್ದಾರೆ" ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ತುಷ್ಟೀಕರಿಸುವ ನೀತಿಯಿಂದ ಈ ರೀತಿಯ ಘಟನೆಗಳಾಗುತ್ತಿವೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿ, "ಬಿಜೆಪಿಯವರು ಎಲ್ಲಾ ಸಂದರ್ಭದಲ್ಲೂ ಈ ರೀತಿ ಮಾತನಾಡುವುದು ಸರಿಯಲ್ಲ. ಹೀಗೆ ಮಾತನಾಡುವುದನ್ನು ಬಿಟ್ಟರೆ ಅವರಿಗೆ ಬೇರೆ ಅಜೆಂಡಾ ಇಲ್ಲ" ಎಂದು ತಿರುಗೇಟು ನೀಡಿದರು.