ಕರ್ನಾಟಕ

karnataka

ETV Bharat / state

ಸಾಲ ಮರುಪಾವತಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅರೆಸ್ಟ್ - MCC BANK CHAIRMAN ARRESTED

ಸಾಲ ಮರುಪಾವತಿ ವಿಚಾರದಲ್ಲಿ ಮಂಗಳೂರು ಕೆಥೋಲಿಕ್‌ ಸಹಕಾರ ಬ್ಯಾಂಕ್ ಅಧ್ಯಕ್ಷ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದ್ದು, ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎಂಸಿಸಿ ಬ್ಯಾಂಕ್ ಅಧ್ಯಕ್ಷ  ಅನಿಲ್ ಲೋಬೊ
ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ (ETV Bharat)

By ETV Bharat Karnataka Team

Published : Dec 18, 2024, 10:33 PM IST

ಮಂಗಳೂರು:ಮಂಗಳೂರು ಕೆಥೋಲಿಕ್‌ ಸಹಕಾರ (ಎಂಸಿಸಿ) ಬ್ಯಾಂಕ್‌ನಿಂದ ಸಾಲ ಪಡೆದಿದ್ದ ವ್ಯಕ್ತಿಯೊಬ್ಬರು, ‘ನನ್ನ ಸಾವಿಗೆ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಕಾರಣ’ ಎಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಾಯಿಬೆಟ್ಟು ಕುಟಿನೋ ಪದವು ನಿವಾಸಿ ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡವರು. ಈ ಸಂಬಂಧ ಅನಿಲ್ ಲೋಬೋ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮನೋಹರ್ ಪಿರೇರಾ ಅವರು ಉಳಾಯಿಬೆಟ್ಟುವಿನ ಕುಟಿನೋ ಪದವಿನಲ್ಲಿರುವ ತಮ್ಮ ಮನೆಯ ಮೇಲೆ ಎಂಸಿಸಿ ಬ್ಯಾಂಕ್‌ನಲ್ಲಿ ಹತ್ತು ವರ್ಷಗಳ ಹಿಂದೆ ಸಾಲ ಪಡೆದಿದ್ದರು. ಈ ಸಾಲದ ಕಂತನ್ನು ಅವರ ದೊಡ್ಡಣ್ಣ ಮೆಲ್ಬರ್ನ್‌ ಅವರು ತೀರಿಸುತ್ತಿದ್ದರು. ಕೋವಿಡ್ ಸಂದರ್ಭ ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಮೆಲ್ಬರ್ನ್‌ ಅವರಿಗೆ ಲೋನ್ ಕಂತು ಬ್ಯಾಂಕಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2 ವರ್ಷಗಳ ಹಿಂದೆ ಬ್ಯಾಂಕ್‌ನವರು ಮನೆಯನ್ನು ಸೀಜ್ ಮಾಡಿದ್ದರು. ಇದರಿಂದ ಮನೋಹರ್ ಪಿರೇರಾರಿಗೆ ಮಾನಸಿಕ ಖಿನ್ನತೆ ಉಂಟಾಗಿ ಎರಡು ಸಲ ಹೃದಯಾಘಾತವಾಗಿತ್ತು.

ಬಳಿಕ ಸಿಸ್ಟರ್ ಕ್ರಿಸ್ಟಿನ್ ಅವರು ದತ್ತಿ ಸಂಸ್ಥೆಯಿಂದ 2023ರ ಫೆಬ್ರವರಿಯಲ್ಲಿ ಮನೋಹರ್‌ರವರ ಬ್ಯಾಂಕ್ ಖಾತೆಗೆ 15 ಲಕ್ಷ ವರ್ಗಾಯಿಸಿದ್ದಾರೆ. ಈ ಹಣದಲ್ಲಿ ಬ್ಯಾಂಕ್ ಸಾಲ ತೀರಿಸುವ ಬಗ್ಗೆ ಮನೋಹರ್ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊರೊಂದಿಗೆ ಮಾತನಾಡಿ ಸೆಲ್ಫ್ ಚೆಕ್ ನೀಡಿದ್ದರು. ಬಳಿಕ ಬ್ಯಾಂಕಿನವರು ಸೀಜ್ ಮಾಡಿದ ಮನೆಯನ್ನು 6 ತಿಂಗಳ ಹಿಂದೆ ವಾಪಸ್ ವಾಸಕ್ಕೆ ಬಿಟ್ಟು ಕೊಟ್ಟಿದ್ದರು. ಸಾಲ ಕಂತು ಇನ್ನೂ ಕೂಡ ಬಾಕಿ ಇರುವುದರಿಂದ ಮನೋಹರ್‌ರವರು ಮಾನಸಿಕವಾಗಿ ನೊಂದು ಡಿಸೆಂಬರ್ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅವರು ಮೊಬೈಲ್ ವಿಡಿಯೋ ಮಾಡಿ, 'MCC ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಸೀಜ್ ಮಾಡಿರುವ ಮನೆಗೆ ತಾನು 15 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಆದರೆ ಆತ 9 ಲಕ್ಷ ತಿಂದಿದ್ದಾನೆ' ಎಂದು ಹೇಳಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೋಲಾರ: 3 ಬೈಕ್​ಗಳಿಗೆ ಬೊಲೆರೋ ವಾಹನ ಡಿಕ್ಕಿ, ಐವರು ಸ್ಥಳದಲ್ಲೇ ಸಾವು

ABOUT THE AUTHOR

...view details