ಹಾವೇರಿ:ಸುಮಾರು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಹಾನಗಲ್ ತಾಲೂಕಿನ ಮಾರಂಬೀಡ ಮೊರಾರ್ಜಿ ವಸತಿ ಶಾಲೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ವಿದ್ಯಾರ್ಥಿಗಳು ಓದಲು, ಸ್ನಾನ ಮಾಡಲು, ಮಲಗಲು ಬೇಕಾಗಿರುವಂತಹ ಮೂಲಭೂತ ಅಗತ್ಯಗಳೇ ಇಲ್ಲದೆ, ಮಕ್ಕಳು ಪ್ರತಿಯೊಂದಕ್ಕೂ ಪರದಾಡುವಂತಾಗಿದೆ.
ವಸತಿನಿಲಯದಲ್ಲಿ ಸರಿಯಾದ ಬೆಳಕಿಲ್ಲದೆ ವಿದ್ಯಾರ್ಥಿಗಳು, ಒಂದು ಕೊಠಡಿಗೆ ಅಳವಡಿಸಿರುವ ಟ್ಯೂಬ್ಲೈಟ್ ಅಡಿಯಲ್ಲಿ ಓದುವಂತಾಗಿದೆ. ಇನ್ನು ಫ್ಯಾನ್‌ಗಳಂತೂ ರೆಕ್ಕೆ ಮುರಿದಿವೆ. ಮಕ್ಕಳು ಮಲಗಲು ನೀಡಿದ ಸುಸಜ್ಜಿತ ಹಾಸಿಗೆಗಳು ಮಳೆನೀರಿನಿಂದ ಹಾಳಾಗಿವೆ. ಇನ್ನು ವಸತಿನಿಲಯದಲ್ಲಿ ಮಕ್ಕಳಿಗೆ ಸ್ನಾನ ಮಾಡಲು ದಿನನಿತ್ಯದ ಕರ್ಮಾದಿಗಳನ್ನು ಮುಗಿಸಿಕೊಳ್ಳಲು ಸಮರ್ಪಕ ನೀರಿನ ವ್ಯವಸ್ಥೆಯೂ ಇಲ್ಲ. ಕುಡಿಯುವ ನೀರಂತೂ ಶಾಲೆಯ ಕ್ಯಾಂಪಸ್‌ನಲ್ಲಿಯೇ ಇಲ್ಲ. ಇಲ್ಲಿಯ ಮಕ್ಕಳು ಫಿಲ್ಟರ್ ನೀರಿನ ಬದಲು ಪಕ್ಕದ ಮಠದಲ್ಲಿನ ಕೊಳವೆಬಾವಿಯಿಂದ ಬರುವ ನೀರು ಕುಡಿಯುವ ಸ್ಥಿತಿ ಇದೆ.
ಇನ್ನು ಮಲಗುವ ಕೊಠಡಿ ಕಿಟಕಿಯ ಗ್ಲಾಸ್‌ಗಳು ಒಡೆದು ಹೋಗಿದ್ದು, ಸೊಳ್ಳೆಗಳ ಕಾಟ ಹೇಳತೀರದು. ಈ ಕೊಠಡಿಗಳಲ್ಲಿರುವ ಸ್ವಿಚ್ ಬೋರ್ಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಿದ್ಯಾರ್ಥಿಗಳು ರಾತ್ರಿಯಾದರೆ ಸಾಕು ಯಾವಾಗ ಬೆಳಗ್ಗೆಯಾಗುತ್ತೋ ಎಂದು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಸತಿ ನಿಲಯದಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳು ವಾಸಿಸುತ್ತಿದ್ದು, ಪಾರಿವಾಳಗಳ ಹಿಕ್ಕೆ, ಮೂತ್ರವಾಸನೆ ವಿದ್ಯಾರ್ಥಿಗಳಿಗೆ ಹಿಂಸೆ. ಈ ಕುರಿತು ವಸತಿನಿಲಯ ವಾರ್ಡನ್ ಮತ್ತು ಶಿಕ್ಷಕರಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ವಿದ್ಯಾರ್ಥಿಗಳ ಅಳಲು.
ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದು. ವಿದ್ಯಾರ್ಥಿಗಳ ಸ್ನಾನಕ್ಕೆ ಬಿಸಿನೀರಿನ ಸೌಲಭ್ಯ ಇಲ್ಲದಾಗಿ ಹಲವು ತಿಂಗಳುಗಳೇ ಕಳೆದಿವೆ. ವಿಪರ್ಯಾಸವೆಂದರೆ ವಿದ್ಯಾರ್ಥಿನಿಯರಿಗೆ ಸಖಿಕಿಟ್ ಬರದೆ ಎರಡು ತಿಂಗಳಾಗಿವೆ. ವಸತಿ ನಿಲಯದ ರೇಷನ್ ಸಹ ಸಮರ್ಪಕವಾಗಿದರದ ದಿನಗಳನ್ನು ಇಲ್ಲಿಯ ವಿದ್ಯಾರ್ಥಿಗಳು ಕಳೆದಿದ್ದಾರೆ. ವಸತಿ ನಿಲಯದಲ್ಲಿ ಪ್ರತಿನಿತ್ಯ ಒಂದಿಲ್ಲಾಂದ್ರೆ ಇಬ್ಬರು ಮಕ್ಕಳು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.