ಮಂಡ್ಯ:"ಸೆ.11ರಂದು ನಡೆದ ಘಟನೆ ಬಳಿಕ ಸದ್ಯ ನಾಗಮಂಗಲ ಪಟ್ಟಣ ಶಾಂತವಾಗಿದೆ. ಘಟನೆ ಸಂಬಂಧ 24 ಪ್ರಕರಣ ದಾಖಲಿಸಲಾಗಿದ್ದು, 55 ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾಗಮಂಗಲದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಅಮಾಯಕರಿಗೆ ಏನೂ ಮಾಡಲ್ಲ, ಅವರು ಪಟ್ಟಣಕ್ಕೆ ಬರಬಹುದು. ಘಟನೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಲಾಗಿದೆ. ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ತಂಡ ರಚನೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಯಲ್ಲಿ ನಡೆದಿರುವ ಘಟನೆಗಳ ವಿಡಿಯೋ ಬಿಟ್ಟು, ನಾಗಮಂಗಲ ಪ್ರಕರಣ ಅಂತ ಪೋಸ್ಟ್ ಹಾಕುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ" ಎಂದು ಎಸ್ಪಿ ತಿಳಿಸಿದರು.
"ಮುಂದಿನ ದಿನಗಳಲ್ಲಿ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡಲಾಗುವುದು. ಘಟನೆ ಸಂಬಂಧ ಮೊದಲು ಸುಮೋಟೊ ಕೇಸ್, ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಗುಂಪುಗಾರಿಕೆ, ಅಂಗಡಿ-ಮುಂಗಟ್ಟಿಗೆ ಬೆಂಕಿ, ಬೈಕ್ಗೆ ಬೆಂಕಿ, ಕಾನೂನು ಸುವ್ಯವಸ್ಥೆಗೆ ತೊಂದರೆ ಸೇರಿದಂತೆ 24 ಪ್ರಕರಣ ದಾಖಲಿಸಲಾಗಿದೆ. 55 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಂಗಡಿ-ಮುಂಗಟ್ಟು ಹಾನಿ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿ, ಆರೋಪಿಗಳ ಮೇಲೆ ಕ್ರಮ ಜರುಗಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಅಮಾಯಕರಿಗೆ ತೊಂದರೆ ಕೊಡಲ್ಲ:"ಘಟನೆಯಿಂದ ಕೆಲವು ಗ್ರಾಮಗಳ ಯುವಕರು ಊರು ಬಿಟ್ಟಿದ್ದಾರೆ. ಆದರೆ, ನಾವು ಅಮಾಯಕರಿಗೆ ತೊಂದರೆ ಕೊಡಲ್ಲ. ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿ, ಭಾಗಿಯಾದವರನ್ನು ಮಾತ್ರ ಬಂಧಿಸಿದ್ದೇವೆ. ಆರೋಪಿಗಳ ಪತ್ತೆಗೆ ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಸಿಸಿಟಿವಿ ದೃಶ್ಯ ಕಲೆಹಾಕಲಾಗಿದೆ. ಪ್ರಕರಣಲ್ಲಿ 100ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ" ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.