ಮಂಗಳೂರು:ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಕಠಿಣ ಸಜೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಪೋಕ್ಸೊ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ತೆಂಕ ಎಡಪದವು ನಿವಾಸಿ ಪ್ರಕಾಶ್ (32) ಶಿಕ್ಷೆಗೊಳಗಾದ ಅಪರಾಧಿ.
2023ರ ಜ.17ರಂದು ಬೆಳಗ್ಗೆ 10ಗಂಟೆಗೆ ಸಂಬಂಧಿಯಾಗಿದ್ದ ಅಪರಾಧಿ ಪ್ರಕಾಶ್ ಮನೆಗೆ 14 ವರ್ಷದ ಬಾಲಕಿ ಬಂದಿದ್ದಳು. ಈ ವೇಳೆ, ಆತನ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ಪ್ರಕಾಶ್ ಬಾಲಕಿಯನ್ನು ಅಡುಗೆ ಕೋಣೆಗೆ ಎಳೆದೊಯ್ದ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆಯೊಡ್ಡಿದ್ದನು.
ಘಟನೆಯಿಂದ ನೊಂದ ಬಾಲಕಿ ತನ್ನ ಕೈಗಳನ್ನು ಬ್ಲೇಡಿನಿಂದ ಕುಯ್ದುಕೊಂಡಿದ್ದು, ಈ ವೇಳೆ ಆಕೆಯ ಸಹೋದರಿ ವಿಚಾರಿಸಿದ್ದಾಳೆ. ಈ ವೇಳೆ ಅತ್ಯಾಚಾರ ಪ್ರಕರಣ ಬಯಲಿಗೆ ಬಂದಿದೆ. ಬಳಿಕ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಪೋಕ್ಸೊ ವಿಶೇಷ ನ್ಯಾಯಾಲಯವು ಅಪರಾಧಿ ಪ್ರಕಾಶ್ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿ, ದಂಡದ 50 ಸಾವಿರ ರೂ. ಹಣವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಿದೆ. ಅಲ್ಲದೇ ಹೆಚ್ಚುವರಿಯಾಗಿ 2.5 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕ ಕೆ. ಬದರಿನಾಥ್ ನಾಯರಿ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ:ಹಣ ನೀಡದ ಮಲತಾಯಿ ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್ - Life Imprisonment