ಕೋಲಾರ:ಪ್ರೇಯಸಿಯ ಮನೆಗೆ ಹೋಗಿ ಮದುವೆ ಮಾಡಿಕೊಡುವಂತೆ ಕೇಳಿದ ವಿವಾಹಿತನನ್ನು ಯುವತಿಯ ಮನೆಯವರು ಅಟ್ಟಾಡಿಸಿ ಹಲ್ಲೆ ಮಾಡಿ ಹತ್ಯೆಗೈದ ಘಟನೆ ಕೋಲಾರದ ನೂರ್ ನಗರದಲ್ಲಿ ನಡೆದಿದೆ. ಉಸ್ಮಾನ್ ಕೊಲೆಯಾದ ವ್ಯಕ್ತಿ. ಜಮೀರ್, ನಜೀರ್, ಅಫ್ರೀದ್ ಹಾಗೂ ಸಲ್ಮಾನ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಉಸ್ಮಾನ್ ವಿ.ಎಂ. ಜಿಮ್ ನಡೆಸಿಕೊಂಡು ಜೀವನ ನಡೆಸುತ್ತಿದ್ದ. ಈತ ಐದು ವರ್ಷಗಳ ಹಿಂದೆ ಜಬೀನಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಗಂಡು ಮಗುವಿದೆ. ಈ ನಡುವೆ ಜಬೀನಾಗೆ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ಈ ವೇಳೆ ಜಬೀನಾಳ ಯೋಗಕ್ಷೇಮ ವಿಚಾರಿಸಲು ಮನೆಗೆ ಬರುತ್ತಿದ್ದ ಯುವತಿಯನ್ನು ಉಸ್ಮಾನ್ ಪ್ರೀತಿಸುತ್ತಿದ್ದನಂತೆ.
ಎಸ್ಪಿ ಬಿ.ನಿಖಿಲ್, ಉಸ್ಮಾನ್ ಪತ್ನಿ ಜಬೀನಾ (ETV Bharat) ಆದರೆ ಜಬೀನಾ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಪತಿ ಹಾಗೂ ಯುವತಿ ವಿರುದ್ದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೂ ಉಸ್ಮಾನ್ ಆಕೆಯನ್ನು ಮದುವೆ ಮಾಡಿಕೊಳ್ಳಲು ಬಯಸಿದ್ದ. ಅದರಂತೆ ನೂರ್ ನಗರದ ಯುವತಿಯ ಮನೆ ಬಳಿ ಹೋಗಿ ಆಕೆಯನ್ನು ಮದುವೆ ಮಾಡಿಕೊಡುವಂತೆ ಅವರ ಮನೆಯವರನ್ನು ಕೇಳಿದ್ದನಂತೆ. ಈ ವೇಳೆ ಯುವತಿಯ ಸಂಬಂಧಿಕರು ಉಸ್ಮಾನ್ನನ್ನು ರೂಂನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಹೊರಬಂದ ಉಸ್ಮಾನ್ನನ್ನು ನೂರ್ ನಗರದ ಗಲ್ಲಿ ಗಲ್ಲಿಯಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಗಲ್ಪೇಟೆ ಪೊಲೀಸರು ಆಗಮಿಸಿ ಹಲ್ಲೆಗೊಳಗಾಗಿದ್ದ ಉಸ್ಮಾನ್ನನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಉಸ್ಮಾನ್ ಕೊನೆಯುಸಿರೆಳೆದಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಪ್ರತಿಕ್ರಿಯಿಸಿ, "ನೂರ್ ನಗರದಲ್ಲಿ ಉಸ್ಮಾನ್ ಎಂಬ ವ್ಯಕ್ತಿಯನ್ನು ನಾಲ್ಕು ಜನ ಸೇರಿ ಕೊಲೆ ಮಾಡಿದ್ದಾರೆ. ಉಸ್ಮಾನ್, ಜಬೀನಾ ಎಂಬವರನ್ನು ಮದುವೆಯಾಗಿದ್ದ. ಕೆಲ ವರ್ಷಗಳ ನಂತರ ಉಸ್ಮಾನ್, ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮೊದಲ ಪತ್ನಿಯನ್ನು ಬಿಟ್ಟು, ಯುವತಿಯನ್ನು ಮದುವೆ ಮಾಡಿಕೊಡುವಂತೆ ಆಕೆಯ ಮನೆಗೆ ಹೋಗಿ ಕೇಳಿದಾಗ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ತಲೆಗೆ ಪೆಟ್ಟಾಗಿದ್ದರಿಂದ ಉಸ್ಮಾನ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ" ಎಂದು ತಿಳಿಸಿದರು.
ಉಸ್ಮಾನ್ ಪತ್ನಿ ಜಬೀನಾ ಮಾತನಾಡಿ, "ನನ್ನ ಪತಿ ಯುವತಿಯ ಮನೆಯವರು ಕರೆದಿದ್ದಾರೆ ಎಂದು ಹೋಗಿದ್ದರು. ನಂತರ ಮನೆಯವರೆಲ್ಲಾ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಉಸ್ಮಾನ್ ಅಲ್ಲಿಂದ ತಪ್ಪಿಸಿಕೊಂಡು ನಮ್ಮ ಮನೆ ಬಳಿ ಬಂದರೂ ತಪ್ಪಿಸಿಕೊಳ್ಳಲು ಬಿಟ್ಟಿಲ್ಲ, ಅವರನ್ನು ತಡೆಯಲು ಹೋಗಿದ್ದ ನನ್ನ ಸಹೋದರರ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿ, ನಾನು ನಿನ್ನ ಪತ್ನಿಗೆ ಕಿಡ್ನಿ ಕೊಟ್ಟು ಜೊತೆಯಲ್ಲಿದ್ದು ನೋಡಿಕೊಳ್ಳುತ್ತೇನೆ ಎಂದು ನನ್ನ ಪತಿಗೆ ಹೇಳಿದ್ದಳು. ನಂತರ ಮನೆಗೆ ಕರೆಸಿಕೊಂಡು ಹಲ್ಲೆ ಮಾಡಿ ಹೊಡೆದು ಸಾಯಿಸಿದ್ದಾರೆ" ಎಂದು ಆರೋಪಿಸಿದರು.
ಇದನ್ನೂ ಓದಿ:ಅತ್ಯಾಚಾರ ಆರೋಪ: ಬಿಜೆಪಿ ಮುಖಂಡ ಸೋಮಶೇಖರ್ ಜಯರಾಜ್ ವಿರುದ್ಧ ಎಫ್‌ಐಆರ್