ದಾವಣಗೆರೆ:ವ್ಯಕ್ತಿಯೋರ್ವ ವಿವಾಹಿತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಚಾಕು ಇರಿದಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಾಟಪ್ಪ (30) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಈತ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಅಷ್ಟರಲ್ಲಿ ಮಹಿಳೆ ಅತ್ಯಾಚಾರಕ್ಕೆ ಪ್ರತಿರೋಧವೊಡ್ಡಿ, ಜೋರಾಗಿ ಕೂಗಿಕೊಂಡಿದ್ದಾರೆ. ಗ್ರಾಮಸ್ಥರಿಗೆ ವಿಚಾರ ಗೊತ್ತಾಗುತ್ತದೆ ಎಂದು ತಿಳಿದ ಆರೋಪಿ, ಮಹಿಳೆಯ ಕುತ್ತಿಗೆ ಸೇರಿದಂತೆ ಮೂರು ಕಡೆ ಚಾಕು ಇರಿದಿದ್ದಾನೆ. ಮಹಿಳೆಯ ಚೀರಾಟ ಕೇಳಿ ಧಾವಿಸಿದ ಗ್ರಾಮಸ್ಥರು, ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.