ಬೆಂಗಳೂರು: ರಸ್ತೆಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅದನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಡಿ.ಜೆ.ಹಳ್ಳಿಯ ಅರ್ಬಜ್ ಖಾನ್ ಎಂಬುವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಮಂಜೂರು ಮಾಡುವಂತೆ ಕೋರಿ ಡಿ.ಜೆ.ಹಳ್ಳಿಯ ಚಿಕ್ಕಣ್ಣ ಬ್ಲಾಕ್ ನಿವಾಸಿ ಅರ್ಬಜ್ ಖಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರ ಆರೋಪಿ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಪ್ರಕರಣ ದಾಖಲಾಗಿವೆ. ಆತ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಜಾಮೀನು ನೀಡಿದರೆ ಅರ್ಜಿದಾರ ಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಮತ್ತು ಇದೇ ಮಾದರಿ ಕೃತ್ಯ ಎಸಗುವ ಸಾಧ್ಯತೆಯಿದೆ ಎಂಬ ಸರ್ಕಾರಿ ವಕೀಲರ ಆಕ್ಷೇಪ ಸೂಕ್ತವಾಗಿದೆ. ಹಾಗಾಗಿ, ಈ ಹಂತದಲ್ಲಿ ಜಾಮೀನು ಮಂಜೂರು ಮಾಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.
ಆರೋಪಿ ಅರ್ಬಜ್ ಖಾನ್ 2024ರ ಮೇ 28ರಂದು ಸಂಜೆ 5.30ಕ್ಕೆ ಟ್ಯಾನಿ ರಸ್ತೆಯ ಈದ್ಗಾ ಮಸೀದಿ ಬಳಿ ಕೈಯಲ್ಲಿ ಮಚ್ಚು ಹಿಡಿದುಕೊಂಡು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಈ ವೇಳೆ ಸಯ್ಯದ್ ರಿಜ್ವಾನ್ ಪಾಷಾ ಎಂಬಾತ, ಅರ್ಬಜ್ ಖಾನ್ ಬಳಿಗೆ ಹೋಗಿ ಏಕೆ ಸುಮ್ಮನೆ ಬೈಯುತ್ತಿರುವೆ ಎಂದು ಕೇಳಿದ್ದನು. ಇದರಿಂದ ಪಾಷಾನನ್ನು ಉದ್ದೇಶಿಸಿ, ನನ್ನ ತಂಟೆಗೆ ಬಂದರೆ ನಿನ್ನ ಇವತ್ತು ಜೀವ ಸಹಿತವಾಗಿ ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದ. ಅಲ್ಲದೆ, ಮಚ್ಚಿನಿಂದ ಪಾಷಾ ತಲೆಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದ. ಪ್ರಕರಣ ಕುರಿತು ಪಾಷಾ ಡಿ.ಜೆ.ಹಳ್ಳಿ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಪೊಲೀಸರು ಎಫ್ಐಆರ್ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದರು. ಆತನಿಗೆ 13ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ನಿರಾಕರಿಸಿತ್ತು. ಹಾಗಾಗಿ, ಜಾಮೀನು ಕೋರಿ ಅರ್ಬಜ್ ಹೈಕೋರ್ಟ್ ಮೊರೆ ಹೋಗಿದ್ದ. ಹೈಕೋರ್ಟ್ ಸಹ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ.
ಓದಿ:ಪ್ರಜ್ವಲ್ ಕಾರು ಚಾಲಕನ ಫೋನ್‌ನಲ್ಲಿರುವ ವಿಡಿಯೋಗಳನ್ನು ಒದಗಿಸಲಾಗದು: ಹೈಕೋರ್ಟ್