ಕರ್ನಾಟಕ

karnataka

ETV Bharat / state

ಪತ್ನಿಯೊಂದಿಗೆ ಸ್ನೇಹ ಮುಂದುವರೆಸದಂತೆ ಹೇಳಿದವನ ಹಲ್ಲೆಗೈದು ಹತ್ಯೆ: ಇಬ್ಬರು ಆರೋಪಿಗಳ ಬಂಧನ - MURDER

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಭಿಷೇಕ್​ ಎನ್ನುವಾತ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

arrested accused
ಬಂಧಿತ ಆರೋಪಿಗಳು (ETV Bharat)

By ETV Bharat Karnataka Team

Published : Nov 30, 2024, 2:21 PM IST

Updated : Nov 30, 2024, 2:34 PM IST

ಬೆಂಗಳೂರು: ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆಗೈದು ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿದ್ದ ಇಬ್ಬರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಭಿಷೇಕ್ (36) ಎಂಬಾತನ ಮೇಲೆ ಹಲ್ಲೆಗೈದು ಸಾವಿಗೆ ಕಾರಣರಾಗಿದ್ದ‌ ಕಾರ್ತಿಕ್ ಎಸ್. ಹೆಚ್ (27) ಹಾಗೂ ಚೇತನ್ ಕುಮಾರ್ ಎನ್. ಜಿ (33) ಬಂಧಿತ ಆರೋಪಿಗಳು.

ಅಭಿಷೇಕ್ ಹಾಗೂ ಆತನ ಸಹೋದರ ಅವಿನಾಶ್ 8 ವರ್ಷದ ಹಿಂದೆ ಹಾಸನದ ಹಿರಿಸಾವೆ ಮೂಲದ ಸಹೋದರಿಯರು ವಿವಾಹವಾಗಿದ್ದರು. ಇತ್ತೀಚಿಗೆ ಸಹೋದರಿಯರಿಬ್ಬರಿಗೂ ಪರಿಚಿತನಾಗಿದ್ದ ಆರೋಪಿ ಕಾರ್ತಿಕ್, ಮನೆಗೆ ಬರುವುದು, ಫೋನ್‌ನಲ್ಲಿ ಸದಾ ಮಾತನಾಡುವುದನ್ನು ಆರಂಭಿಸಿದ್ದ. 6 ತಿಂಗಳ ಹಿಂದೆ ಈ ವಿಚಾರ ತಿಳಿದ ಸಹೋದರರಿಬ್ಬರು ಬುದ್ಧಿವಾದ ಹೇಳಿದಾಗ ಇಬ್ಬರ ಪತ್ನಿಯರೂ ಸಹ ಪತಿಯರಿಂದ ದೂರಾಗಿದ್ದರು.

ನವೆಂಬರ್ 27ರಂದು ರಾತ್ರಿ 8 ಗಂಟೆ ಸುಮಾರಿಗೆ ಬ್ಯಾಡರಹಳ್ಳಿಯ ಅನುಪಮಾ ಸ್ಕೂಲ್ ಬಳಿ ಕಾರ್ತಿಕ್‌ನನ್ನು ಭೇಟಿಯಾಗಿದ್ದ ಅಭಿಷೇಕ್, ತಾನು ಹಾಗೂ ತನ್ನ ಸಹೋದರನ ಪತ್ನಿಯೊಂದಿಗೆ ಸ್ನೇಹ ಮುಂದುವರೆಸದಂತೆ ಕಾರ್ತಿಕ್‌ನಿಗೆ ತಿಳಿಸಿದ್ದ. ಆ ಸಮಯದಲ್ಲಿ ಕಾರ್ತಿಕ್ ಹಾಗೂ ಆತನ ಜೊತೆಗಿದ್ದ ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿತ್ತು. ಆರೋಪಿ ಕಾರ್ತಿಕ್ ಹಾಗೂ ಆತನ ಸಹಚರ ಚೇತನ್‌ ಕುಮಾರ್, ಅಭಿಷೇಕ್‌ನ ಮೇಲೆ ಕೈ ಕಡಗದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ವಿಷಯ ತಿಳಿದು ಗಲಾಟೆ ಬಿಡಿಸಲು ಹೋದ ಅವಿನಾಶ್ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಅಭಿಷೇಕ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅಭಿಷೇಕ್ ಮೃತಪಟ್ಟಿದ್ದಾನೆ. ಆರೋಪಿಗಳ ವಿರುದ್ಧ ಅವಿನಾಶ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿಗಳಾದ ಕಾರ್ತಿಕ್ ಹಾಗೂ‌ ಚೇತನ್ ಕುಮಾರ್‌ನನ್ನು ಬಂಧಿಸಿರುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ಆರೋಪಿ ಬಂಧನ

Last Updated : Nov 30, 2024, 2:34 PM IST

ABOUT THE AUTHOR

...view details