ಉಡುಪಿ:ದಸರಾ ಬಂತೆಂದರೆ ಮಹಿಷ ಹೆಸರು ರಾಜ್ಯದಾದ್ಯಂತ ವಿವಾದಕ್ಕೆ ಕಾರಣವಾಗುತ್ತದೆ. ದೇವಿ ಚಾಮುಂಡೇಶ್ವರಿಗೆ ಹೇಗೆ ದಸರಾ ಸಂದರ್ಭ ಪೂಜೆ ನಡೆಯುತ್ತದೆಯೋ, ಅದೇ ರೀತಿಯಾಗಿ ಮಹಿಷನನ್ನು ಪೂಜಿಸುವ ಮಹಿಷ ದಸರಾ ಆಚರಣೆಯೂ ನಡೆಯುತ್ತದೆ. ಇಲ್ಲಿ ವಿಶೇಷ ಏನೆಂದರೆ ಉಡುಪಿಯ ಐತಿಹಾಸಿಕ ನಗರಿ ಒಂದರಲ್ಲಿ ಇಂದಿಗೂ ಮಹಿಷಾಸುರನ ಹೆಸರಿನ ದೇವಸ್ಥಾನ ಒಂದು ಇದೆ. ಇಲ್ಲಿ ನಿತ್ಯವೂ ಮಹಿಷನಿಗೆ ಪೂಜೆಯಾಗುತ್ತದೆ.
ಕರಾವಳಿ ಜಿಲ್ಲೆ, ರಾಜ್ಯದಲ್ಲಿಯೇ ತನ್ನ ವಿಶಿಷ್ಟ ಆಚರಣೆ, ಪದ್ಧತಿ, ಸಂಸ್ಕೃತಿಯ ಮೂಲಕ ಗುರುತಿಸಿಕೊಂಡಂತಹ ಪ್ರದೇಶ. ದೈವ ದೇವರುಗಳ ಆಗರವಾಗಿರುವ ಕರಾವಳಿಯಲ್ಲಿ ಇಂದಿಗೂ ನಾಗನನ್ನು ಜೀವಂತ ದೈವ ಎಂದೇ ಪೂಜಿಸುವ ಪರಿಪಾಠವಿದೆ. ಪ್ರಕೃತಿಯನ್ನು ಪೂಜಿಸುವ ಪರಿಪಾಠವಿರುವ ಕರಾವಳಿಯಲ್ಲಿ ಮಹಿಷನಿಗೂ ಪೂಜೆ ನಡೆಯುತ್ತಿದೆ ಎಂದರೆ ನೀವು ನಂಬಲೇಬೇಕು.
ಐತಿಹಾಸಿಕ ನಗರಿ ಬಾರ್ಕೂರಿನಲ್ಲಿದೆ ಮಹಿಷ ದೇವಸ್ಥಾನ (ETV Bharat) ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಷ ದಸರಾ ಚರ್ಚೆಗೆ ಕಾರಣವಾಗಿತ್ತು. ಕಳೆದ ಕೆಲವು ವರ್ಷಗಳ ಹಿಂದೆ ಮಹಿಷ ದಸರಾ ಎನ್ನುವ ವಿಚಾರ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಒಂದು ಪಂಥ ಮಹಿಷಾಸುರನನ್ನು ಪೂಜಿಸಬಾರದು ಎಂದರೆ, ಇನ್ನೊಂದು ಪಂಥ ಮಹಿಷಾ ಎಂದರೆ ನಮ್ಮ ರಾಜ, ಅವನನ್ನು ನಾವು ಪೂಜಿಸುತ್ತೇವೆ ಎನ್ನುವ ಗೊಂದಲದಿಂದಾಗಿ ದೊಡ್ಡ ಯುದ್ಧವೇ ನಡೆದಿತ್ತು. ಸಾಕಷ್ಟು ಗೊಂದಲಕ್ಕೆ ಈಡು ಮಾಡುವ ಈ ವಿಚಾರಕ್ಕೆ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ ಎಂದರೆ ತಪ್ಪಾಗಲಾರದು.
ಬಾರ್ಕೂರಿನಲ್ಲಿದೆ ಮಹಿಷ ದೇವಸ್ಥಾನ: ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ಇಂದಿಗೂ ಕೂಡ ಮಹಿಷನಿಗೆ ನಿತ್ಯ ಪೂಜೆ ನಡೆಯುತ್ತದೆ. ಇಲ್ಲಿನ ಅರ್ಚಕರು ತಿಳಿಸುವಂತೆ ಇಲ್ಲಿ ಮಹಿಷ ಎನ್ನುವ ಹೆಸರಿನ ಶಿವಗಣಕ್ಕೆ ಪೂಜೆ ಮಾಡಲಾಗುತ್ತದೆ. ಶಿವನ ಪ್ರಥಮ ಗಣ ಎಂದು ಇಲ್ಲಿ ಪ್ರತಿನಿತ್ಯವೂ ಮಹಿಷನಿಗೆ ಪೂಜೆಯ ಜೊತೆ ವರ್ಷಕ್ಕೆ ಒಮ್ಮೆ ತೊಟ್ಟಿಲು ಸೇವೆ ಕೂಡ ನಡೆಯುತ್ತದೆ.
ಇನ್ನು ಕರಾವಳಿ ಈ ಹಿಂದೆ ಮಹಿಷ ಮಂಡಲ ಎಂದು ಗುರುತಿಸಿಕೊಳ್ಳುತ್ತಿದ್ದು, ಇಲ್ಲಿಗೆ ಮಹಿಷ ಎನ್ನುವ ರಾಜನಿದ್ದ ಎನ್ನುವ ಪ್ರತೀತಿ ಕೂಡ ಇದೆ. ಹೀಗಾಗಿ ಮಹಿಷ ಎಂದರೆ ಮಹಿ ಎಂದರೆ ಭೂಮಿ. ಈಶ ಎಂದರೆ ಒಡೆಯ ಎಂದರೆ ಚಕ್ರವರ್ತಿ ಎನ್ನುವ ಕಾರಣಕ್ಕೆ ಇಲ್ಲಿ ಮಹಿಷನಿಗೆ ನಿತ್ಯ ಪೂಜೆ ನಡೆಯುತ್ತದೆ ಎನ್ನುವುದು ಇತಿಹಾಸ ತಜ್ಞರ ಮಾತು.
ಕ್ರಿಸ್ತಶಕ ನಾಲ್ಕನೇ ಶತಮಾನಕ್ಕೆ ಸೇರಿದ ಇಲ್ಲಿನ ಮಹಿಷನ ವಿಗ್ರಹ ಕೋಣದ ತಲೆ ಮಾನವನ ದೇಹದ ರೂಪದಲ್ಲಿ ಇತ್ತು. ಆನಂತರ 1971 ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬೇರೆಯ ವಿಗ್ರಹ ತಂದು ಪ್ರತಿಷ್ಠಾಪನೆ ಮಾಡಿ, ಹಿಂದಿನ ಕೋಣದ ತಲೆ, ಮಾನವ ದೇಹದ ಮತ್ತೊಂದು ವಿಗ್ರಹವನ್ನು ಕೂಡ ಪ್ರತಿಷ್ಠಾಪಿಸಿ, ಜೊತೆಗೆ ಉಳಿದ ದೈವಗಳನ್ನು ತಂದು ಕೂರಿಸಿ ಇಲ್ಲಿ ನಿತ್ಯ ಪೂಜೆ ನೆರವೇರಿಸಲಾಗುತ್ತಿದೆ.
ಇದನ್ನೂ ಓದಿ:ಉಡುಪಿಯಲ್ಲಿದೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಕುಂಭಾಸುರನ ನಾಶಕ್ಕಾಗಿ ಭೀಮನಿಗೆ ಖಡ್ಗವನಿಟ್ಟ ಗಣಪ! - Anegudde Sri Vinayaka Temple