ಕಡಬದಲ್ಲಿ ಜನಸಂಪರ್ಕ ಸಭೆ (ETV Bharat) ಕಡಬ(ದಕ್ಷಿಣ ಕನ್ನಡ):ಕರ್ನಾಟಕ ಲೋಕಾಯುಕ್ತ ದ.ಕ.ಜಿಲ್ಲಾ ವತಿಯಿಂದ ಕಡಬ ತಾಲೂಕು ಆಡಳಿತ ಕಚೇರಿಯಲ್ಲಿಂದು ಸಾರ್ವಜನಿಕ ಜನಸಂಪರ್ಕ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲೋಕಾಯುಕ್ತ ಎಸ್‌ಪಿ ನಟರಾಜ್, "ತಿಂಗಳಿಗೊಮ್ಮೆ ಜಿಲ್ಲೆಯ ಪ್ರತೀ ತಾಲೂಕು ಕೇಂದ್ರಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ನಿರ್ಧರಿಸಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡುವ ಕಾರ್ಯ ಮಾಡುತ್ತಿದ್ದೇವೆ. 7 ತಿಂಗಳ ಹಿಂದೆ ಕಡಬದಲ್ಲಿ ಜನಸಂಪರ್ಕ ಸಭೆ ಮಾಡಿ, ಬಹುತೇಕ ಅಹವಾಲುಗಳನ್ನು ಪರಿಹರಿಸಿದ್ದೇವೆ" ಎಂದರು.
"ಈ ಸಭೆಯಲ್ಲಿ ಹದಿನಾರು ಅರ್ಜಿಗಳು ಬಂದಿದ್ದು, ಬಹುತೇಕ ದೂರುಗಳು ಕಂದಾಯ ಇಲಾಖೆಯ ಸರ್ವೇ, ಪೋಡಿ, ಪ್ಲಾಟಿಂಗ್ ಕುರಿತಾಗಿವೆ. ಇವುಗಳನ್ನು ಸ್ಥಳೀಯವಾಗಿ ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿದ 9 ಅರ್ಜಿ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುವುದು" ಎಂದು ತಿಳಿಸಿದರು.
"ಲೋಕಾಯುಕ್ತದಲ್ಲಿ ದಾಖಲಾದ ಕೆಲವೊಂದು ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಪರಿಹರಿಸಲು ಸೂಚನೆ ನೀಡಲಾಗುತ್ತದೆ. ಭ್ರಷ್ಟಾಚಾರ, ಇಲಾಖಾಧಿಕಾರಿಗಳಿಂದ ಆಗುವ ತೊಂದರೆಗಳ ಬಗ್ಗೆ ಸಾರ್ವಜನಿಕರು ಸಭೆಯಲ್ಲಿ ಅಥವಾ ನೇರವಾಗಿ ನಮ್ಮ ಕಚೇರಿಗೆ ಬಂದು ದೂರು ನೀಡಬಹುದು. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಮತ್ತೊಮ್ಮೆ ಮನವಿ ಮಾಡಬಹುದು. ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.
ಅಧಿಕಾರಿಗಳಿಗೆ ಕ್ಲಾಸ್:ಜನಸಂಪರ್ಕ ಸಭೆಯ ಬಳಿಕ ತಾಲೂಕು ಆಡಳಿತ ಭವನದ ಪ್ರತಿ ಇಲಾಖೆಯ ಕಚೇರಿಗೆ ಭೇಟಿ ನೀಡಿದ ಎಸ್‌ಪಿ ನಟರಾಜ್, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. "ಇಲ್ಲಿನ ಸಿಬ್ಬಂದಿಗಳ ಕ್ಯಾಶ್ ರಿಜಿಸ್ಟರ್ ಯಾಕೆ ಮಾಡುತ್ತಿಲ್ಲ. ಖಾಲಿ ಪುಸ್ತಕ ಇಟ್ಟು ಏನು ಮಾಡುತ್ತೀರಿ?" ಎಂದು ತರಾಟೆಗೆ ತೆಗೆದುಕೊಂಡರು. "ಬೆಳಿಗ್ಗೆ ಸಿಬ್ಬಂದಿ ಕಚೇರಿಗೆ ಬರುವಾಗ ಅವರ ಬಳಿ ಎಷ್ಟು ಕ್ಯಾಶ್ ಇದೆ ಎಂದು ದಾಖಲಿಸಬೇಕು. ಸಂಜೆ ಕಚೇರಿಯಿಂದ ಹೊರ ಹೋಗುವಾಗ ಅದನ್ನು ಮತ್ತೆ ಪರಿಶೀಲಿಸಬೇಕು" ಎಂದು ತಹಶೀಲ್ದಾರ್ಗೆ ಆದೇಶಿಸಿದರು.
ಕಡಬ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಉಡುಪಿ: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಲೆ, ಆರೋಪಿ ಪತಿ ಸೆರೆ - Husband Kills Wife