ಬೆಂಗಳೂರು:ರಾಜ್ಯದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಸಂಬಂಧ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದು, ನಾವು ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಅಭ್ಯರ್ಥಿಗಳ ಕುರಿತು ಚರ್ಚಿಸಿದ್ದೇವೆ, ಇನ್ನೊಂದು ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಜಾಲಹಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ದೆಹಲಿಯಲ್ಲಿ ನಮ್ಮ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ದೆಹಲಿಗೆ ತೆರಳಿದ್ದೆ. ಹೈಕಮಾಂಡ್ ಸೂಚನೆಯಂತೆ ನಾವೆಲ್ಲ ದೆಹಲಿಗೆ ಹೋಗಿದ್ದೆವು. ಕರ್ನಾಟಕ ಲೋಕಸಭಾ ಚುನಾವಣೆ ತಯಾರಿ, ಯಾವ ರೀತಿ ಕೆಲಸ ಮಾಡಬೇಕು ಎನ್ನುವುದು ಸೇರಿದಂತೆ ಅಭ್ಯರ್ಥಿಗಳ ಪಟ್ಟಿ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡಿದ್ದಾರೆ. ಯಾರೆಲ್ಲಾ ಸ್ಪರ್ಧೆ ಮಾಡುತ್ತಾರೋ ಅವರ ಬಗ್ಗೆ ಚರ್ಚೆಯಾಗಿದೆ. ಸವಿಸ್ತಾರವಾಗಿ ಅಮಿತ್ ಶಾ, ಜೆಪಿ ನಡ್ಡಾ, ಬಿ.ಎಲ್ ಸಂತೋಷ್, ರಾಜೇಶ್ ಜೊತೆ ಸೇರಿ ಚರ್ಚೆ ಮಾಡಿದ್ದೇವೆ. ಒಂದು ಹಂತದ ಚರ್ಚೆಯಾಗಿದೆ. ವಯಸ್ಸು, ಆರೋಗ್ಯ ಕಾರಣ ಎನ್ನುವ ಕಡೆ ಅಭ್ಯರ್ಥಿ ಬದಲಾಗೋ ಪರಿಸ್ಥಿತಿ ಇದೆ. ನಾವೂ ಕೂಡ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ. ವಾರದಲ್ಲಿ ಪಟ್ಟಿ ಬಿಡುಗಡೆ ಆಗಲಿದೆ ಎಂದರು.
ಸಮಸ್ಯೆ ಇರುವ ಕಡೆ ಚರ್ಚೆ ಮಾಡಿದ್ದೇವೆ:ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಸಮಸ್ಯೆ ಇರೋ ಕಡೆ ಮತ್ತೊಂದು ಸಭೆ ಕೂಡ ಆಗಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಮೈಸೂರು, ಕಲಬುರಗಿ ಎಲ್ಲದರ ಬಗ್ಗೆಯೂ ಚರ್ಚೆಯಾಗಿದೆ. ಕಲಬುರಗಿ ಹಾಲಿ ಸಂಸದರಿಗೆ ಚಾನ್ಸ್ ಇದೆ. ನಮ್ಮ ಅಭಿಪ್ರಾಯ ನಾವು ತಿಳಿಸಿದ್ದೇವೆ. ಕೇಂದ್ರದ ನಾಯಕರಿಗೆ ಸರ್ವೆ ರಿಪೋರ್ಟ್ ಬಂದಿದೆ. ಅದರ ಆಧಾರದ ಮೇಲೆ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.
ಆರೋಗ್ಯದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ದೆಹಲಿಗೆ ಬಂದಿರಲಿಲ್ಲ. ಅವರು ಎರಡು, ಮೂರು ದಿನದಲ್ಲಿ ದೆಹಲಿಗೆ ಹೋಗಿ ನಮ್ಮ ಹೈಕಮಾಂಡ್ ಭೇಟಿ ಆಗ್ತಾರೆ. ಅವರಿಗೆ ಟಿಕೆಟ್ ಎಲ್ಲಿ ಬೇಕು ಅಂತ ಚರ್ಚೆಯಾಗಿದೆ. ಯಾವ ಕ್ಷೇತ್ರ ಅಂತ ಸಭೆಯಲ್ಲಿ ತೀರ್ಮಾನ ಆಗಲಿದೆ. ಮಂಡ್ಯದ ವಿಚಾರದಲ್ಲಿ ಏನೇ ತೀರ್ಮಾನ ಆದರೂ ಬದ್ಧವಾಗಿದ್ದೇವೆ. ಮಂಡ್ಯದಲ್ಲಿ ನಮ್ಮ ಮತಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ಜೆಡಿಎಸ್ ಕೂಡ ಪ್ರಬಲವಾಗಿದೆ. ಎರಡೂ ಪಕ್ಷಗಳ ಮತ ಕ್ರೂಢೀಕರಣವಾದರೆ ಎನ್‌ಡಿಎ ಅಭ್ಯರ್ಥಿ ಗೆಲ್ಲಲಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಮೂವರ ಹೆಸರನ್ನ ಕಳುಹಿಸಲಾಗಿದೆ. ಮಂಜುನಾಥ್ ಅವರ ಹೆಸರು ಬೆಂಗಳೂರು ಗ್ರಾಮಾಂತರದಿಂದ ಕೇಳಿ ಬರ್ತಿದೆ. ಮಂಜುನಾಥ್ ಅವರು ಕಾರ್ಯಕ್ರಮಕ್ಕೆ ಬರ್ತಿದ್ದಾರೆ. ನಾವೆಲ್ಲಾ ಅಲ್ಲೂ ಕುಳಿತು ಮಾತಾಡುತ್ತೇವೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಾಲು, ಜೇನಿನ ರೀತಿ ಬರೆಯುತ್ತಾರೆ ಎಂದು ತಿಳಿಸಿದರು.