ಕರ್ನಾಟಕ

karnataka

ETV Bharat / state

ಕೋರೆ, ಜೊಲ್ಲೆ ಸೇರಿ ಅನೇಕರನ್ನು ಬಿಜೆಪಿಗೆ ಕರೆತಂದಿದ್ದೇ ನಾನು, ನಂಗೆ ಬೆಳಗಾವಿ ಟಿಕೆಟ್ ಕೊಡಿ: ಶಂಕರಗೌಡ ಪಾಟೀಲ ಆಗ್ರಹ

ಕೋರೆ, ಜೊಲ್ಲೆ ಸೇರಿ ಅನೇಕರನ್ನು ಬಿಜೆಪಿಗೆ ತಂದಿದ್ದೇ ನಾನು. ನಂಗೆ ಬೆಳಗಾವಿ ಟಿಕೆಟ್ ಕೊಡಿ ಎಂದು ಶಂಕರಗೌಡ ಪಾಟೀಲ ಆಗ್ರಹಿಸಿದ್ದಾರೆ.

Shankar Gowda Patil  Belagavi ticket  BJP leader  Belagavi politics
ಶಂಕರಗೌಡ ಪಾಟೀಲ ಹೇಳಿಕೆ

By ETV Bharat Karnataka Team

Published : Mar 19, 2024, 7:53 PM IST

ಶಂಕರಗೌಡ ಪಾಟೀಲ ಹೇಳಿಕೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠಗೊಳಿಸಲು ವಿವಿಧ ಪಕ್ಷಗಳಲ್ಲಿದ್ದ ಅನೇಕ ಮುಖಂಡರನ್ನು ಪಕ್ಷಕ್ಕೆ ಸೇರಿಸಿದ್ದೆ ನಾನು. ಈಗ ಅವರೆಲ್ಲಾ ಜಿಲ್ಲೆಯಲ್ಲಿ ಬಹುದೊಡ್ಡ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಅವರೆಲ್ಲಾ ಈ ಬಾರಿ ಬೆಳಗಾವಿ ಲೋಕಸಭೆಗೆ ನನಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕರಿಗೆ ಹೇಳಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಶಂಕರಗೌಡ ಪಾಟೀಲ ಹೇಳಿದರು.

ಈ ಕುರಿತು ನಗರದಲ್ಲಿಂದು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರಭಾಕರ ಕೋರೆ, ಅಮರಸಿಂಹ ಪಾಟೀಲ, ಡಾ. ಬಿ.ಬಿ. ದೇಸಾಯಿ, ಬಾಬಾಗೌಡ ಪಾಟೀಲ, ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಮಹಾಂತೇಶ ಕವಟಗಿಮಠ ಸೇರಿ ಅನೇಕ ನಾಯಕರ ಕೈಕಾಲು ಬಿದ್ದು ಪಕ್ಷಕ್ಕೆ ಕರೆದುಕೊಂಡು ಬಂದೆ. ಅವರೆಲ್ಲಾ ಬೆಳೆಯಲಿ, ಮಂತ್ರಿ ಆಗಲಿ ಎಂದು ಹೀಗೆ ಮಾಡಿದೆ. ಈಗ ಅವರೆಲ್ಲಾ ಬೆಳೆದಿದ್ದು, ನನಗೆ ಟಿಕೆಟ್ ಕೊಡುವಂತೆ ಪಕ್ಷದ ಹೈಕಮಾಂಡ್​ಗೆ ಹೇಳಲಿ. ನಾನು ನಿಮ್ಮವನೇ ಆಗಿದ್ದೇನೆ ಎಂದರು.

ರಾಜ್ಯ ಸರ್ಕಾರದ ದಿಲ್ಲಿ ವಿಶೇಷ ಪ್ರತಿನಿಧಿಯಾಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಬುಡಾ ಅಧ್ಯಕ್ಷ, ರಾಷ್ಟ್ರೀಯ ಸಾಂಬಾರ ಮಂಡಳಿ ಉಪಾಧ್ಯಕ್ಷ ಸೇರಿ ಅನೇಕ‌ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ. ಹಾಗಾಗಿ, ಬೆಳಗಾವಿ ಲೋಕಸಭೆಯಿಂದ ನನಗೆ ಟಿಕೆಟ್ ನೀಡುವಂತೆ ಕೇಳಿದ್ದೇನೆ. ನನಗೆ ಕೊಟ್ಟರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಇಲ್ಲ ಪಕ್ಷ ಬೇರೆ ಯಾರಿಗೇ ಟಿಕೆಟ್ ನೀಡಿದರೂ ಅವರ ಪರ ಪ್ರಚಾರ ಮಾಡುತ್ತೇನೆ. ಪಕ್ಷ ಘೋಷಿಸುವ ಅಭ್ಯರ್ಥಿ ವಿರುದ್ಧ ಏನಾದರೂ ಅಲೆ ಎದ್ದರೆ ಮೋದಿ ಅಲೆಯಲ್ಲಿ ಅದು ಕೊಚ್ಚಿಕೊಂಡು ಹೋಗುತ್ತದೆ. ಕೇವಲ ವೈಯಕ್ತಿಕ ಹಿತಾಸಕ್ತಿಗಾಗಿ ನಾವು ಕೆಲಸ ಮಾಡಿದರೆ ಘಾತಕ, ಆತ್ಮ ವಂಚನೆ ಮಾಡಿದಂತೆ ಆಗುತ್ತದೆ ಎಂದು ಶಂಕರಗೌಡ ಪಾಟೀಲ ಅಭಿಪ್ರಾಯಪಟ್ಟರು.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ, ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ‌ದಾಸ್ ಅಗರವಾಲ್, ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ನನಗೆ ಟಿಕೆಟ್ ನೀಡುವಂತೆ ವಿನಂತಿ ಮಾಡಿಕೊಂಡಿದ್ದೇನೆ. ಅದೇ ರೀತಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೂ ಹೇಳಿದ್ದು, ಅಮಿತ್ ಶಾ, ಬಿ.ಎಲ್. ಸಂತೋಷ ಭೇಟಿಯಾಗಲು ಸಾಧ್ಯ ಆಗಲಿಲ್ಲ. ಭೇಟಿ ವೇಳೆ ಯಾರೂ ನನಗೆ ಭರವಸೆ ಕೊಟ್ಟಿಲ್ಲ. ನೋಡೋಣ ಅಂತಾ ಅಷ್ಟೇ ಹೇಳಿದ್ದಾರೆ ಎಂದರು.

ಜಗದೀಶ ಶೆಟ್ಟರ್ ಅವರು ನನಗೆ ಕರೆ ಮಾಡಿದ್ದರು. ಆಗ ಸರ್ ನಿಮಗೆ ಟಿಕೆಟ್ ಆಯ್ತಂತೆ ಎಂದು ಕೇಳಿದೆ. ಹೌದು, ನನಗೆ ಟಿಕೆಟ್ ಆಗುತ್ತದೆ. ನಿಮ್ಮನ್ನು ಭೇಟಿಯಾಗಲು ಬರುತ್ತೇನೆ ಅಂತಾ ಹೇಳಿದರು. ಅಂಬೇಡ್ಕರ್, ಬಸವಣ್ಣ ಸೇರಿ ಅನೇಕ ಮಹನೀಯರ ತ್ಯಾಗದ ಮುಂದೆ ನನ್ನದು ಏನೂ ಅಲ್ಲ. ಒಬ್ಬರ ತ್ಯಾಗ ಇನ್ನೊಬ್ಬರಿಗೆ ನಾಂದಿ ಆಗಬೇಕೆ ಹೊರತು, ತೊಂದರೆ ಆಗಬಾರದು. ನನ್ನ ತ್ಯಾಗವನ್ನು ಪಕ್ಷ ಪರಿಗಣಿಸುತ್ತಾ ಎಂದು ಕಾದು ನೋಡುತ್ತೇನೆ ಎಂದು ಶಂಕರಗೌಡ ಪಾಟೀಲ ಹೇಳಿದರು.

ಓದಿ:''ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ'' : ಸಿಎಂ ಸಿದ್ದರಾಮಯ್ಯ

ABOUT THE AUTHOR

...view details