ಕರ್ನಾಟಕ

karnataka

ETV Bharat / state

ಪ್ರಜ್ವಲ್ ರೇವಣ್ಣ ಸೇರಿ ರಾಜ್ಯದ 6 ಹಾಲಿ ಸಂಸದರಿಗೆ ಸೋಲು - Lok Sabha Election Results 2024 - LOK SABHA ELECTION RESULTS 2024

ರಾಜ್ಯದ ಆರು ಹಾಲಿ ಸಂಸದರು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿದ್ದಾರೆ.

ರಾಜ್ಯದ 6 ಹಾಲಿ ಸಂಸದರು ಈ ಬಾರಿ ಸೋಲು ಕಂಡಿದ್ದಾರೆ
ರಾಜ್ಯದ 6 ಹಾಲಿ ಸಂಸದರು ಈ ಬಾರಿ ಸೋಲು ಕಂಡಿದ್ದಾರೆ (IANS image (ಸಂಗ್ರಹ ಚಿತ್ರ))

By ETV Bharat Karnataka Team

Published : Jun 4, 2024, 3:11 PM IST

ಬೆಂಗಳೂರು:ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿವೆ. ಇಂದಿನ ಫಲಿತಾಂಶದ ಅಂಕಿ - ಅಂಶಗಳನ್ನು ಅವಲೋಕಿಸಿದರೆ ಹಲವಾರು ರೋಚಕ ಸಂಗತಿಗಳು ಕಂಡು ಬರುತ್ತವೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 6 ಹಾಲಿ ಸಂಸದರಿಗೆ ಮತದಾರರು ಸೋಲಿನ ರುಚಿ ತೋರಿಸಿರುವುದು ಗಮನಾರ್ಹ.

ಸೋತ ಹಾಲಿ ಸಂಸದರು: ಬೀದರ್ ಕ್ಷೇತ್ರದಿಂದ ಹಾಲಿ ಸಂಸದರಾಗಿದ್ದ ಬಿಜೆಪಿಯ ಭಗವಂತ್ ಖೂಬಾ ಕಾಂಗ್ರೆಸ್​ನ ಸಾಗರ್ ಖಂಡ್ರೆ ಎದುರು ಸೋಲು ಕಂಡಿದ್ದಾರೆ. ಸಾಗರ್ ಖಂಡ್ರೆ ಸಚಿವ ಈಶ್ವರ ಖಂಡ್ರೆ ಅವರ ಪುತ್ರ. 2014 ಮತ್ತು 2019ರ ಚುನಾವಣೆಯಲ್ಲಿ ಗೆದ್ದಿರುವ ಭಗವಂತ ಖೂಬಾ ಹ್ಯಾಟ್ರಿಕ್ ಜಯದ ನಿರೀಕ್ಷೆ ಹುಸಿಯಾಗಿದೆ. ಯುವಕ ಸಾಗರ್ ಖಂಡ್ರೆ ಮೊದಲ ಬಾರಿಯ ಸ್ಪರ್ಧೆಯಲ್ಲೇ ಸಂಸತ್ ಪ್ರವೇಶಿಸಿದ್ದಾರೆ.

ಡಾ ಉಮೇಶ್​ ಜಾಧವ್​ಗೆ ನಿರಾಸೆ:ಕಲಬುರಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಹಾಲಿ ಸಂಸದ ಡಾ.ಉಮೇಶ್ ಜಾಧವ್ ಕಾಂಗ್ರೆಸ್​ನ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಸೋಲು ಕಂಡಿದ್ದಾರೆ. 2019ರ ಚುನಾವಣೆಯಲ್ಲಿ ಜಾಧವ್, ಖರ್ಗೆ ಅವರನ್ನೇ ಸೋಲಿಸಿ ಸಂಸತ್ ಪ್ರವೇಶಿಸಿದ್ದರು. ಹೀಗಾಗಿ ಈ ಕ್ಷೇತ್ರ ಗೆಲ್ಲುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಈ ಬಾರಿ ಖರ್ಗೆ ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಕಣಕ್ಕಿಳಿಸಿ ಯಶಸ್ಸು ಕಂಡಿದ್ದಾರೆ.

ನಿವೃತ್ತ ಐಎಎಸ್​ ಅಧಿಕಾರಿ ವಿರುದ್ಧ ಅಮರೇಶ್ವರ್​ ನಾಯಕ್​ಗೆ ಸೋಲು:ರಾಯಚೂರು ಕ್ಷೇತ್ರದಲ್ಲಿಯೂ ಹಾಲಿ ಸಂಸದರು ಸೋಲು ಕಂಡಿರುವುದು ವಿಶೇಷವಾಗಿದೆ. ಹಾಲಿ ಸಂಸದ ಬಿಜೆಪಿಯ ರಾಜಾ ಅಮರೇಶ್ವರ್ ನಾಯಕ್ ಅವರು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯ್ಕ್ ಎದುರು ಸೋಲು ಕಂಡಿದ್ದಾರೆ.

ಅಣ್ಣಾ ಸಾಹೇಬ್​ ಜೊಲ್ಲೆಗೆ ಪರಾಜಯ:ಇನ್ನು ಕಿತ್ತೂರು ಕರ್ನಾಟಕದ ಕಡೆಗೆ ನೋಡುವುದಾದರೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಸೋಲು ಕಂಡಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಕಾಂಗ್ರೆಸ್​ನ ಪ್ರಿಯಾಂಕಾ ಜಾರಕಿಹೊಳಿ ಇಲ್ಲಿ ಗೆಲುವಿನ ನಗೆ ಬೀರಿದ್ದು, ಪ್ರಥಮ ಪ್ರಯತ್ನದಲ್ಲಿಯೇ ಸಂಸತ್ತಿಗೆ ಪ್ರವೇಶಿಸಿದ್ದಾರೆ.

25 ವರ್ಷಗಳ ಬಳಿಕ ಹಾಸನದಲ್ಲಿ ಜೆಡಿಎಸ್​​ಗೆ ಸೋಲು:ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲುಪಾಲಾಗಿರುವ ಹಾಲಿ ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡ ಜನ ಈ ಬಾರಿ ತಿರಸ್ಕರಿಸಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಮಾಜಿ ಸಚಿವ, ದಿವಂಗತ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್​ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದರೊಂದಿಗೆ ಹಾಸನದಲ್ಲಿ 25 ವರ್ಷಗಳ ನಂತರ ಕಾಂಗ್ರೆಸ್ ಗೆಲುವು ಸಾಧಿಸಿದಂತಾಗಿದೆ.

ಇಡೀ ದೇಶದ ಗಮನ ಸೆಳೆದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್ ಅವರ ಭದ್ರಕೋಟೆ ಎಂದೇ ಹೇಳಲಾಗಿದ್ದ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್​ನ ಡಿಕೆ ಸುರೇಶ್ ಸೋಲನುಭವಿಸಿದ್ದಾರೆ. ರಾಜ್ಯದ ಪ್ರಖ್ಯಾತ ಹೃದಯ ರೋಗ ತಜ್ಞ, ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಇಲ್ಲಿ ಮೂರು ಬಾರಿ ಸಂಸದರಾಗಿದ್ದ ಸುರೇಶ್ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಇದನ್ನೂ ಓದಿ : 6 ಜನ ಸಚಿವರ ಮಕ್ಕಳಲ್ಲಿ ಪ್ರಿಯಾಂಕಾ, ಸುನಿಲ್​ ಬೋಸ್​ ಗೆಲುವು; ಮೃಣಾಲ್​ ಹೆಬ್ಬಾಳ್ಕರ್​ಗೆ ಸೋಲು - MINISTERS KINS

ABOUT THE AUTHOR

...view details