ಬೆಂಗಳೂರು:ಇತ್ತೀಚೆಗಷ್ಟೇ ಕೆಎಸ್ಆರ್ಟಿಸಿಗೆ ಸೇರ್ಪಡೆಯಾಗಿರುವ ಅಶ್ವಮೇಧ ಕ್ಲಾಸಿಕ್ ಬಸ್ಗಳ ಸೇವೆ ಸಕ್ಸಸ್ ಆಗಿದ್ದು, ವೇಗಧೂತ ಬಸ್ಗಳಿಗಿಂತಲೂ ಹೆಚ್ಚಿನ ಜನಮನ್ನಣೆ ಗಳಿಸುತ್ತಿವೆ. ಅಷ್ಟು ಮಾತ್ರವಲ್ಲದೆ ಗಳಿಕೆಯಲ್ಲಿಯೂ ವೇಗಧೂತವನ್ನು ಮೀರಿ ಸಾಗುತ್ತಿವೆ. ಇದರಿಂದಾಗಿ ಸಾರಿಗೆ ನಿಗಮ ಖುಷಿಯಾಗಿದ್ದು, ಮತ್ತಷ್ಟು ಅಶ್ವಮೇಧ ಕ್ಲಾಸಿಕ್ ಬಸ್ಗಳ ಸೇರ್ಪಡೆಗೆ ಮುಂದಾಗಿದೆ.
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯಾದ ಶಕ್ತಿ ಯೋಜನೆ ಜಾರಿಯಾದ ನಂತರ ಕೆಎಸ್ಆರ್ಟಿಸಿ ಕೆಂಪು ಬಣ್ಣದ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಯಿತು. ಇದರ ಬೆನ್ನಲ್ಲೇ ಅದನ್ನು ಮೀರಿದ ಬೇಡಿಕೆ ಕೆಎಸ್ಆರ್ಟಿಸಿಯ ಅಶ್ವಮೇಧ ಕ್ಲಾಸಿಕ್ ಬಸ್ಗಳಿಗೆ ಬಂದಿದೆ. ನಾಲ್ಕು ತಿಂಗಳ ಹಿಂದಷ್ಟೇ ರಸ್ತೆಗಳಿಸಿದ ಅಶ್ವಮೇಧ ಬಸ್ಗಳು ಪ್ರಯಾಣಿಕರ ಸೆಳೆಯುವಲ್ಲಿ ಸಫಲವಾಗಿದ್ದು, ಕೆಂಪು ಬಣ್ಣದ ಸಾಮಾನ್ಯ ವೇಗಧೂತ ಬಸ್ಗಳಿಗಿಂತ ಹೆಚ್ಚಾಗಿ ಕ್ಲಾಸಿಕ್ ಅನುಭವ ನೀಡುವ ಅಶ್ವಮೇಧ ಬಸ್ಗಳ ಕಡೆ ಮುಖ ಮಾಡುವಂತೆ ಮಾಡಿದೆ. ಇದಕ್ಕೆ ಈ ಬಸ್ಗಳ ಗಳಿಕೆಯಲ್ಲಿನ ಅಂಕಿ ಅಂಶಗಳೇ ನಿದರ್ಶನವಾಗಿದೆ.
ಸದ್ಯ ಬೆಂಗಳೂರು ಕೇಂದ್ರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮೈಸೂರು ನಗರ, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಮಂಗಳೂರು, ಪುತ್ತೂರು, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ವಿಭಾಗಗಳಿಂದ ಅಶ್ವಮೇಧ ಕ್ಲಾಸಿಕ್ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಒಟ್ಟು 507 ಬಸ್ಗಳನ್ನು ರಸ್ತೆಗಳಿಸಿದ್ದು, ಇದರಲ್ಲಿ 400 ಬಸ್ಗಳು ಪಾಯಿಂಟ್ ಟು ಪಾಯಿಂಟ್ ಸೇವೆ ಒದಗಿಸುತ್ತಿವೆ. ಈ ಬಸ್ಗಳು ಕೆಂಪು ಬಣ್ಣದ ವೇಗಧೂತ ಬಸ್ಗಳಿಗಿಂತ ಹೆಚ್ಚಾಗಿ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಬಸ್ಗಳ ಗಾತ್ರ, ವಿನ್ಯಾಸ, ಆಸನಗಳ ವಿನ್ಯಾಸ, ಸ್ಥಳಾವಕಾಶ, ದೊಡ್ಡ ಕಿಟಕಿ ಗಾಜುಗಳು ಮತ್ತು ವೇಗಕ್ಕೆ ಮನಸೋತಿರುವ ಪ್ರಯಾಣಿಕರು ಮೊದಲ ಆದ್ಯತೆಯನ್ನು ಅಶ್ವಮೇಧ ಕ್ಲಾಸಿಕ್ ಬಸ್ಗಳಿಗೆ ನೀಡುತ್ತಿದ್ದಾರೆ.
ಇಲಾಖೆಗೆ ಉತ್ತಮ ಆದಾಯ; 16 ವಿಭಾಗಳ 382 ಶೆಡ್ಯೂಲ್ಗಳಲ್ಲಿ ಸಂಚರಿಸುತ್ತಿರುವ ಅಶ್ವಮೇಧ ಕ್ಲಾಸಿಕ್ ಬಸ್ಗಳು 74,72,204 ಕಿಲೋಮೀಟರ್ ಸಂಚರಿಸಿದ್ದು, ₹ 41 ಕೋಟಿ 90 ಲಕ್ಷ, 44 ಸಾವಿರದ 47 ರೂಪಾಯಿ (41,90,44,047 ರೂ.)ಗಳ ಆದಾಯ ಗಳಿಸಿದೆ. ಪ್ರತಿ ಕಿಲೋಮೀಟರ್ ಗೆ 43 ರೂ.ಗಳಿಂದ 68 ರೂ.ಗಳವರೆಗೆ ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯ ಗಳಿಕೆಯನ್ನು ಮಾಡುತ್ತಿರುವ ಬಸ್ಗಳು ಸರಾಸರಿ 56.08 ರೂ. ಗಳಿಕೆ ಮಾಡುತ್ತಿವೆ. ಇದೇ ಸಾಮಾನ್ಯ ಸಾರಿಗೆಯಾದ ವೇಗಧೂತ ಬಸ್ಗಳಲ್ಲಿ 42 ರೂ.ಗಳಿಂದ 68 ರೂ.ಗಳ ವರೆಗೆ ಆದಾಯ ಸಂಗ್ರಹ ಮಾಡುತ್ತಿದ್ದರೂ ಸರಾಸರಿ ಗಳಿಕೆ 45 ರೂ.ಗಳ ಆಸು ಪಾಸಿನಲ್ಲಿದೆ. ಸಾಮಾನ್ಯ ಬಸ್ಗಳಿಗಿಂತಲೂ ಗಳಿಕೆಯಲ್ಲಿ ಸರಾಸರಿ 10 ರೂ.ಗಳ ಹೆಚ್ಚಿನ ಹಣವನ್ನು ಅಶ್ವಮೇಧ ಕ್ಲಾಸಿಕ್ ಬಸ್ಗಳು ಗಳಿಸುತ್ತಿವೆ.