ಕೊಪ್ಪಳ:ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಇಂದು ಬಿಜೆಪಿಗೆ ರಾಜೀನಾಮೆ ನೀಡಿದರು. ''ನಾನು ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡಬೇಕು'' ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ಧಾರೆ.
ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಿಲ್ಲ. ಇವರ ಬದಲಿಗೆ ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಕೊಡಲಾಗಿದೆ. ಇದರಿಂದ ಆರಂಭದಿಂದಲೂ ಸಂಗಣ್ಣ ಅಸಮಾಧಾನಗೊಂಡಿದ್ದರು. ಈ ಹಿಂದೆ ಬಿಜೆಪಿ ನಾಯಕರು ಸಂಧಾನ ಪ್ರಯತ್ನ ಮಾಡಿದ್ದರು. ಆಗ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವ ಸುಳಿವು ನೀಡಿದ್ದರು.
ಆದರೆ, ಇಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ತಮ್ಮ ನಾಮಪತ್ರ ಸಲ್ಲಿಕೆಗೆ ಮೊದಲು ಸಂಗಣ್ಣ ಕರಡಿ ಅವರನ್ನು ಭೇಟಿ ಮಾಡಿದರು. ನೇರವಾಗಿ ಸಂಗಣ್ಣ ಮನೆಗೆ ಆಗಮಿಸಿ, ಆಶೀರ್ವಾದ ಪಡೆದರು. ಈ ವೇಳೆ, ಮಾತನಾಡಿದ್ದ ಸಂಗಣ್ಣ ಕರಡಿ, ''ರಾಜಶೇಖರ ನಾಮಪತ್ರ ಸಲ್ಲಿಸುವ ಮೊದಲು ನಮ್ಮ ಮನೆಗೆ ಆಶೀರ್ವಾದ ಪಡೆಯಲು ಬಂದಿದ್ದರು, ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದೇನೆ'' ಎಂದರು.