ಬೆಳಗಾವಿ:ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಗುರುವಾರ ರಾತ್ರಿ ಅಪಹರಣ ಮಾಡಿರುವ ಆರೋಪ ಕೇಳಿ ಬಂದಿದೆ. ಪಟ್ಟಣದ ಚೌಕಿಮಠದ ಬಳಿ ಸದಸ್ಯ ನಾಗರಾಜ ನಿಂತಿದ್ದಾಗ ಸ್ಕಾರ್ಪಿಯೋ ವಾಹನದಲ್ಲಿ ಬಂದ ಕೆಲವರು ಬಲವಂತವಾಗಿ ನಾಗರಾಜ ಅವರನ್ನು ಅಪಹರಣ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಿತ್ತೂರಿನಲ್ಲಿ ಬಿಜೆಪಿ ಸದಸ್ಯನ ಕಿಡ್ನಾಪ್ (ETV Bharat) ಸೆಪ್ಟೆಂಬರ್ 3 ರಂದು ಕಿತ್ತೂರು ಪಟ್ಟಣ ಪಂಚಾಯತ್ ಚುನಾವಣೆ ನಿಗದಿಯಾಗಿದೆ. 9 ಬಿಜೆಪಿ ಸದಸ್ಯರು, 5 ಕಾಂಗ್ರೆಸ್ ಸದಸ್ಯರು, ನಾಲ್ವರು ಪಕ್ಷೇತರ ಸದಸ್ಯರಿದ್ದು, ಇವರಲ್ಲಿ 4 ಪಕ್ಷೇತರ ಸದಸ್ಯರು ಕಾಂಗ್ರೆಸ್ಗೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಹೊಂದಿದೆ.
ಹಾಗಾಗಿ, ಪಟ್ಟಣ ಪಂಚಾಯಿತಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕಾಂಗ್ರೆಸ್ ಅವರು ಅಪಹರಿಸಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿಯ ಕಾರ್ಯಕರ್ತರು ತಡರಾತ್ರಿಯೇ ಕಿತ್ತೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದು, "ಬಿಜೆಪಿ ಸದಸ್ಯರೊಬ್ಬರ ಅಪಹರಣ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಅಪಹರಣಕ್ಕೆ ಒಳಗಾದ ವ್ಯಕ್ತಿಯ ಪತ್ತೆಗೆ ಮೂರು ತಂಡಗಳನ್ನು ರಚಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ: ತಂಬಾಕು ಬೇಕೆಂದು ಗಲಾಟೆ? - Prisoners Fight in Jail