ಕರ್ನಾಟಕ

karnataka

ETV Bharat / state

ಉತ್ತರಾಖಂಡದಲ್ಲಿ ಸಿಲುಕಿದ ಕನ್ನಡಿಗ ಚಾರಣಿಗರು; ಡೆಹ್ರಾಡೂನ್​ಗೆ ತೆರಳಿದ ಸಚಿವ ಕೃಷ್ಣ ಬೈರೇಗೌಡ - UTTARAKHAND TREKKING TRAGEDY - UTTARAKHAND TREKKING TRAGEDY

ಉತ್ತರಾಖಂಡದಲ್ಲಿ ಸಿಲುಕಿರುವ ಚಾರಣಿಗರ ರಕ್ಷಣೆಗೆ ಸರ್ಕಾರ ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನೂ ಮಾಡಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Karnataka trekkers stranded in Uttarakhand; Minister Krishna Byre Gowda left for Dehradun
ಉತ್ತರಖಾಂಡದಲ್ಲಿ ಸಿಲುಕಿದ ಕನ್ನಡಿಗ ಚಾರಣಿಗರು; ಡೆಹ್ರಾಡೂನ್​ಗೆ ತೆರಳಿದ ಸಚಿವ ಕೃಷ್ಣ ಬೈರೇಗೌಡ (ETV Bharat)

By ETV Bharat Karnataka Team

Published : Jun 5, 2024, 5:31 PM IST

ಬೆಂಗಳೂರು: ಉತ್ತರಾಖಂಡದಲ್ಲಿ ಸಿಲುಕಿರುವ ಕರ್ನಾಟಕದ ಚಾರಣಿಗರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿದ್ದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಡೆಹ್ರಾಡೂನ್​ಗೆ ತೆರಳಿ ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಲಿದ್ದಾರೆ.

ಕರ್ನಾಟಕದ 20 ಜನ ಚಾರಣಿಗರು ಹಾಗೂ ಓರ್ವ ಗೈಡ್​ರನ್ನೊಳಗೊಂಡ ಚಾರಣಿಗರ ತಂಡವೊಂದು ಉತ್ತರಾಖಂಡದ ಸಹಸ್ತ್ರತಾಲ್ ಮಯಳಿ ಎಂಬ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಾರಣ ಆರಂಭಿಸಿದ್ದಾರೆ. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಯತ್ನಿಸಿದೆ. ಆದರೆ, ಹಿಂತಿರುಗುವ ಮಾರ್ಗದ ಮಾಧ್ಯೆ ನಿನ್ನೆ(ಜೂ.4) ಮಧ್ಯಾಹ್ನ 2 ಗಂಟೆಗೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಎಲ್ಲಾ ಚಾರಣಿಗರು ಅದೇ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ.

"ಕರ್ನಾಟಕದ ಚಾರಣಿಗರು ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ನಿನ್ನೆ ರಾತ್ರಿ ಕಂದಾಯ ಇಲಾಖೆಗೆ ತಿಳಿದುಬಂದಿತ್ತು. ಈ ವಿಚಾರ ತಿಳಿದ ಕೂಡಲೇ ಜಿಲ್ಲಾಡಳಿತದ ಮುಖಾಂತರ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯನ್ನು ಸಂಪರ್ಕಿಸಲಾಯಿತು. ಇವರ ಸಹಾಯದಿಂದ ಕರ್ನಾಟಕದ ಚಾರಣಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ" ಎಂದು ಕಂದಾಯ ಸಚಿವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

"ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳ ಸಹಾಯದಿಂದ ನಿನ್ನೆ ಸಂಜೆಯಿಂದಲೇ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಅಲ್ಲದೆ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಇಂದು ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ. ಜೊತೆಗೆ ಇಂದು ಬೆಳಗ್ಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಲು ಪ್ರಾರಂಭಿಸಿದೆ" ಎಂದು ಹೇಳಿದ್ದಾರೆ.

"ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಕೆಲವು ಚಾರಣಿಗರನ್ನು ಈವರೆಗೆ ರಕ್ಷಿಸಲಾಗಿದ್ದು, ಅವರನ್ನು ಡೆಹ್ರಾಡೂನ್‌ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಚಾರಣಿಗರ ಪೈಕಿ ಒಬ್ಬರೊಂದಿಗೆ ಸ್ವತಃ ನಾನು ಮಾತನಾಡಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಕಲೆಹಾಕಲಾಗಿದೆ. ಉಳಿದವರನ್ನೂ ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದ್ದು, ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದೆ. ಈ ಕಾರ್ಯಾಚರಣೆಗೆ ಸಹಕಾರ ಒದಗಿಸುವ ಸಲುವಾಗಿ ಸ್ವತಃ ನಾನು ಸಹ ಬುಧವಾರ ಮಧ್ಯಾಹ್ನ ಡೆಹ್ರಾಡೂನ್​ಗೆ ಹೊರಟಿದ್ದೇನೆ" ಎಂದು ತಿಳಿಸಿದ್ದಾರೆ.

"ದುರಾದೃಷ್ಟವಶಾತ್‌ ಕೆಲವು ಚಾರಣಿಗರು ಮೃತಪಟ್ಟಿರುವ ವರದಿಯೂ ಲಭ್ಯವಾಗಿದ್ದು, ಅದನ್ನು ನಾವು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮರುದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ. ಮೃತ ಚಾರಣಿಗರ ಮೃತದೇಹಗಳನ್ನು ಹೊರತೆಗೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮಗೆ ಸೂಚನೆ ನೀಡಿದ್ದಾರೆ. ನಾವು ಉತ್ತರಾಖಂಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದ್ದೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡ್​ನಲ್ಲಿ ​ಟ್ರೆಕ್ಕಿಂಗ್​ಗೆ​ ತೆರಳಿದ್ದ 8 ಜನ ಸಾವು: ಕರ್ನಾಟಕದ ಚಾರಣಿಗರು ಸೇರಿ 10 ಜನರ ರಕ್ಷಣೆ - Eight People Died

ABOUT THE AUTHOR

...view details