ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕರಡಿಗೆ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಸ್ತಾವಿತ ವಿಧೇಯಕದಲ್ಲಿ ಆಡಳಿತ ವಿಭಾಗದಲ್ಲಿ ಸ್ಥಳೀಯರಿಗೆ ಶೇಕಡಾ 50ರಷ್ಟು ಮತ್ತು ಇತರ ವಿಭಾಗದಲ್ಲಿ ಶೇಕಡಾ 75ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ಹೇಳಿದೆ. ಸರ್ಕಾರದ ಈ ನಿರ್ಧಾರಕ್ಕೆ ಉದ್ಯಮಿಗಳು, ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವಿತ ಮೀಸಲಾತಿ ವಿಧೇಯಕದಲ್ಲಿರುವ ಅಂಶಗಳೇನು?
- ಪ್ರಸ್ತಾವಿತ ವಿಧೇಯಕದ 'ಸ್ಥಳೀಯ ಅಭ್ಯರ್ಥಿ' ಎಂದರೆ ಕರ್ನಾಟಕದಲ್ಲಿ ಹುಟ್ಟಿ, 15 ವರ್ಷಗಳ ಕಾಲ ಇಲ್ಲಿಯೇ ನೆಲೆಸಿರುವ, ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ, ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ.
- ಪ್ರಸ್ತಾವಿತ ವಿಧೇಯಕವು, "ಯಾವುದೇ ಉದ್ಯಮ, ಕಾರ್ಖಾನೆ ಅಥವಾ ಇತರ ಕ್ಷೇತ್ರಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಶೇಕಡಾ 50ರಷ್ಟು ಆಡಳಿತ ವಿಭಾಗಗಳಲ್ಲಿ ಮತ್ತು ಶೇಕಡಾ 70ರಷ್ಟು ಆಡಳಿತವಲ್ಲದ ವಿಭಾಗಗಳಲ್ಲಿ ನೇಮಿಸಿಕೊಳ್ಳಬೇಕು. ಮಾಧ್ಯಮಿಕ ಶಾಲಾ ಹಂತದಲ್ಲಿ ಕನ್ನಡವನ್ನು ಭಾಷೆಯಾಗಿ ಕಲಿತಿರಬೇಕು. ಈ ಪ್ರಮಾಣಪತ್ರ ಹೊಂದಿರದ ಅಭ್ಯರ್ಥಿಗಳು 'ನೋಡಲ್ ಏಜೆನ್ಸಿ' ನಿಗದಿ ಮಾಡಿದ ಕನ್ನಡ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಕೈಗಾರಿಕೆಗಳು ಮತ್ತು ಸಂಸ್ಥೆಗಳಿಗೆ ನೇಮಕವಾಗಲು ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಸರ್ಕಾರದ ಸಹಯೋಗದೊಂದಿಗೆ ಮೂರು ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಬೇಕು.
- ಅರ್ಹ ಸ್ಥಳೀಯ ಅಭ್ಯರ್ಥಿಗಳು ಸಿಗದೇ ಹೋದ ಸಂದರ್ಭದಲ್ಲಿ ಸರ್ಕಾರಕ್ಕೆ ಮೀಸಲಾತಿ ಸಡಿಲಿಕೆ ಅರ್ಜಿಯನ್ನು ಸಲ್ಲಿಸಬೇಕು. ಈ ವಿನಾಯಿತಿಯು ಆಡಳಿತ ವಿಭಾಗದಲ್ಲಿ ಶೇಕಡಾ 25ಕ್ಕಿಂತ, ಇತರ ವಿಭಾಗಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಇರಬಾರದು ಎಂಬುದನ್ನು ಪ್ರಸ್ತಾವಿತ ವಿಧೇಯಕದಲ್ಲಿ ಕಡ್ಡಾಯ ಮಾಡಿದೆ.
- ಈ ಕಾಯಿದೆಯಡಿ ನೋಡಲ್ ಏಜೆನ್ಸಿಯನ್ನು ಸಹ ಸ್ಥಾಪಿಸಲಾಗುವುದು. ಇದು ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವ ಸ್ಥಳೀಯರ ಮೇಲೆ ನಿಗಾ ವಹಿಸುತ್ತದೆ. ಸರ್ಕಾರಕ್ಕೆ ಕಾಲಕಾಲಕ್ಕೆ ವರದಿಯನ್ನೂ ಸಲ್ಲಿಸಲಿದೆ.
ಸ್ಥಳೀಯ ಎಂದರೆ ಯಾರು?:ಸ್ಥಳೀಯ ಅಭ್ಯರ್ಥಿ ಎಂದರೆ, ವಿಧೇಯಕದ ಕರಡಿನಲ್ಲಿ ಉಲ್ಲೇಖಿಸಿರುವಂತೆ, ಕರ್ನಾಟಕದಲ್ಲಿ ಹುಟ್ಟಿ 15 ವರ್ಷಗಳಿಂದ ವಾಸಿಸಿದ್ದ ವ್ಯಕ್ತಿಯಾಗಿರಬೇಕು. ಆತನಿಗೆ ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಸ್ಪಷ್ಟವಾಗಿ ಮಾತನಾಡಲು ಬರಬೇಕು. ಮಾಧ್ಯಮಿಕ ಅಂದರೆ, 8ರಿಂದ 10ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಭ್ಯಾಸ ಮಾಡಿರಬೇಕು. ಇಲ್ಲವಾದಲ್ಲಿ, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪ್ರಾವೀಣ್ಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರಬೇಕು.
ಬಹುಕಾಲದ ಬೇಡಿಕೆಗೆ ಸಿಕ್ಕ ಮನ್ನಣೆ:ಕನ್ನಡಿಗರಿಗೆ ಖಾಸಗಿ ವಲಯದ ಉದ್ಯೋಗಳಲ್ಲಿ ಶೇಕಡಾ 100ರಷ್ಟು ಉದ್ಯೋಗ ಮೀಸಲಾತಿ ನೀಡಬೇಕು ಎಂಬುದು ಬಹು ಹಿಂದಿನ ಬೇಡಿಕೆಯಾಗಿದೆ. ಅದನ್ನು ಕಾಂಗ್ರೆಸ್ ಸರ್ಕಾರ ಈಗ ಅಂಗೀಕರಿಸಿದೆ. ಈ ಕುರಿತು ಕನ್ನಡಪರ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. ಎಚ್ಚೆತ್ತುಕೊಂಡ ಸರ್ಕಾರ ನಿರ್ಧಾರ ಪ್ರಕಟಿಸಿದೆ.
ಇಂಥದ್ದೊಂದು ಮೀಸಲಾತಿ ನೀಡಿ ಎಂಬ ಧ್ವನಿ ಕೇಳಿಬಂದಿದ್ದು 1984ರಲ್ಲಿ. ಮಾಜಿ ಕೇಂದ್ರ ಸಚಿವೆ ಮತ್ತು ಕರ್ನಾಟಕದ ಮೊದಲ ಮಹಿಳಾ ಸಂಸದೆ ಸರೋಜಿಸಿ ಮಹಿಷಿ ಅವರು ಅಂದು ಈ ಬಗ್ಗೆ ವರದಿ ಸಲ್ಲಿಸಿದ್ದರು. ಅವರ ನೇತೃತ್ವದ ಸಮಿತಿಯು ವರದಿಯಲ್ಲಿ 58 ಶಿಫಾರಸುಗಳನ್ನು ಮಾಡಿತ್ತು. ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100ರಷ್ಟು ಮೀಸಲಾತಿ ನೀಡಬೇಕು ಎಂದು ಸೂಚಿಸಲಾಗಿತ್ತು.