ಬೆಂಗಳೂರು:ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ಜಾರಿಗೆಯಾಗಿ ಒಂದು ವರ್ಷ ಕಳೆದಿದೆ. ಆರ್ಥಿಕ ಸಂಕಷ್ಟದ ಮಧ್ಯೆಯೂ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗೃಹ ಜ್ಯೋತಿ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಗಳಿಂದ ಫಲಾನುಭವಿಗಳು ಪಡೆಯುತ್ತಿರುವ ಪ್ರಯೋಜನಗಳ ಕುರಿತು ಸರ್ಕಾರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದೆ.
ಗೃಹ ಜ್ಯೋತಿ ಯೋಜನೆಯ ಸಮೀಕ್ಷೆ:ಗೃಹ ಜ್ಯೋತಿ ಫಲಾನುಭವಿಗಳ ಪೈಕಿ ಶೇ.45ರಷ್ಟು ಸಮೀಕ್ಷೆ ಮಾಡಲಾಗಿದೆ. ಇನ್ನೂ ಶೇ.55ರಷ್ಟು ಫಲಾನುಭವಿಗಳ ಸಮೀಕ್ಷೆ ನಡೆಸಬೇಕಿದೆ. ಸಮೀಕ್ಷೆಯಂತೆ ಶೇ.98 ಫಲಾನುಭವಿಗಳು ಉಚಿತ ವಿದ್ಯುತ್ ಯೋಜನೆಯಿಂದ ತಮ್ಮ ಜೀವನವನ್ನು ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.29 ಜನರು ಯೋಜನೆಯು ಹೆಚ್ಚಿನ ಅಧ್ಯಯನಕ್ಕೆ ಸಹಾಯ ಮಾಡಿದೆ ಎಂದಿದ್ದಾರೆ. ಇನ್ನು ಶೇ.33 ಜನರು ಇದು ಹಣ ಉಳಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯ ಸಮೀಕ್ಷೆ:ಗೃಹ ಲಕ್ಷ್ಮಿ ಫಲಾನುಭವಿಗಳ ಪೈಕಿ ಶೇ.63 ಸಮೀಕ್ಷೆ ನಡೆಸಲಾಗಿದ್ದು, ಶೇ.37 ಫಲಾನುಭವಿಗಳ ಇನ್ನಷ್ಟೇ ಸಮೀಕ್ಷೆ ನಡೆಸಬೇಕು. ಗೃಹ ಲಕ್ಷ್ಮಿಯಡಿ ಯಜಮಾನಿಗೆ ಕೊಡುವ ಮಾಸಿಕ 2,000 ರೂ. ಹಣದ ಪೈಕಿ ಶೇ.43 ರಷ್ಟು ಹಣವನ್ನು ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಲು ಬಳಸಿದ್ದಾರೆ. ಶೇ.13ರಷ್ಟು ಹಣವನ್ನು ಮಕ್ಕಳ ಶಾಲಾ ಶಿಕ್ಷಣಕ್ಕಾಗಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಶೇ.15ರಷ್ಟು ಜನರು ವೈದ್ಯಕೀಯ ವೆಚ್ಚಗಳಿಗೆ ಬಳಸುತ್ತಿದ್ದರೆ, ಶೇ.23ರಷ್ಟು ಜನರು ಸಾಮಾನ್ಯ ಮನೆ ವೆಚ್ಚಕ್ಕಾಗಿ ಬಳಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.