ಬೆಂಗಳೂರು:ರಾಜ್ಯದಲ್ಲಿ ಉತ್ಪಾದನೆಯಾಗುವ ಅತ್ಯಂತ ಗುಣಮಟ್ಟ ಉತ್ಕೃಷ್ಟವಾದ ಜೇನನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಮಾರುಕಟ್ಟೆ ಮಾಡುವ ಸಲುವಾಗಿ ರಾಜ್ಯ ತೋಟಗಾರಿಕೆ ಇಲಾಖೆಯಿಂದ ಝೇಂಕಾರ ಎಂಬ ವ್ಯಾಪಾರಿ ಚಿಹ್ನೆ (ಟ್ರೇಡ್ ಮಾರ್ಕ್) ನೋಂದಾಯಿಸಿದೆ.
ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರದಿಂದ ಜೇನು ತುಪ್ಪಕ್ಕೆ ಬ್ರ್ಯಾಂಡ್ ಪರಿಚಯಿಸಲಾಗಿದೆ. ಇನ್ನು ಮುಂದೆ ಸರ್ಕಾರದ ಬ್ರ್ಯಾಂಡ್ನಲ್ಲಿಯೇ ಜೇನು ತುಪ್ಪ ಲಭ್ಯವಾಗಲಿದೆ.
ಪಶ್ಚಿಮ ಘಟ್ಟಗಳು ಸೇರಿದಂತೆ ರಾಜ್ಯದಲ್ಲಿ ಅರಣ್ಯ ಮತ್ತು ಬಯಲು ಪ್ರದೇಶದಲ್ಲಿ ಜೇನು ಕೃಷಿಯನ್ನು ಸಾವಿರಾರು ರೈತರು ಅಳವಡಿಸಿಕೊಂಡಿದ್ದಾರೆ. ಅಂತಹ ರೈತರು ಸಂಗ್ರಹಿಸುವ ಜೇನು ಕೃಷಿಯ ಗುಣಮಟ್ಟ ಕಾಯ್ದಿರಿಸಿಕೊಳ್ಳುವುದು ಮತ್ತು ಕರ್ನಾಟಕ ಮಾತ್ರವಲ್ಲದೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಈ ಬ್ರ್ಯಾಂಡ್ ನೋಂದಾಯಿಸಲಾಗಿದೆ.
ಆಕ್ಷೇಪಗಳು ಬಂದಿಲ್ಲ:ಈ ಸಂಬಂಧ ಕಳೆದ ಜನವರಿ ತಿಂಗಳಲ್ಲಿ ಝೇಂಕಾರ ಎಂಬ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಈ ಸಂಬಂಧ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಯಾವುದೇ ಆಕ್ಷೇಪಗಳು ಬಂದಿರಲಿಲ್ಲ. ಹೀಗಾಗಿ, ವ್ಯಾಪಾರಿ ಚಿಹ್ನೆಯನ್ನು ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಬ್ರ್ಯಾಂಡ್ ಮೂಲಕ ಗ್ರಾಹಕರಿಗೆ ಗುಣಮಟ್ಟದ ಜೇನು ತುಪ್ಪ ದೊರಕುವಂತೆ ಮಾಡುವುದು ಮತ್ತು ಜೇನು ಕೃಷಿಕರ ಆರ್ಥಿಕ ಮಟ್ಟ ಹೆಚ್ಚಿಸುವುದು ರಾಜ್ಯ ತೋಟಗಾರಿಕೆ ಇಲಾಖೆ ಮುಖ್ಯ ಉದ್ದೇಶವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಉಪ ನಿರ್ದೇಶಕರಾದ ಕೆ.ಹೇಮಲತಾ ಅವರು 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಇದನ್ನೂ ಓದಿ:ಈ ಸಸ್ಯದಲ್ಲಿ ಅಡಗಿದೆ ಆರೋಗ್ಯದ ಹಲವು ಲಾಭಗಳು: ಶುಗರ್ & ದೇಹದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ!
ಕೃಷಿಕರಿಂದ ಒಡಂಬಡಿಕೆ:ಈಗಾಗಲೇ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಿಂದ ಪರವಾನಿಗೆ ಪಡೆದಿರುವ ರೈತರಿಗೆ ಝೇಂಕಾರ ಎಂಬ ಜೇನು ತುಪ್ಪದ ಬ್ರ್ಯಾಂಡ್ ನೀಡಲಾಗುವುದು. ಈ ಸಂಬಂಧ ಗುಣಮಟ್ಟವನ್ನು ಕಾಯ್ದಿರಿಸಿಕೊಳ್ಳುವುದು ಮತ್ತು ಬೆಲೆ ನಿಗದಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆಯಿಂದ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿಯಲ್ಲಿ ಒಡಂಬಡಿಕೆ ಮಾಡಿಕೊಂಡ ರೈತರು ಝೇಂಕಾರ - ಜೀವನೋಲ್ಲಾಸಕ್ಕೆ ಜೇನು ಎಂಬ ಟ್ಯಾಗ್ಲೈನ್ ಹೆಸರಿನಲ್ಲಿ ಜೇನು ತುಪ್ಪವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಕ್ಕೆ ಸರ್ಕಾರದಿಂದ ಅನುಮತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಒಡಂಬಡಿಕೆ ಹೇಗೆ?:ತೋಟಗಾರಿಕೆ ಇಲಾಖೆಯಿಂದ ಒಡಂಬಡಿಕೆ ಮಾಡಿಕೊಳ್ಳಬಯಸುವವರು ತೋಟಗಾರಿಕೆ ಇಲಾಖೆಯ ಜಾಲತಾಣ https://horticulturedir.karnataka.gov.in ಅಥವಾ ಇ-ಮೇಲ್ ವಿಳಾಸ additionaldirectorropdp@gmail.com ಅನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ:ಈ ಶ್ವೇತ ಗಿಡಮೂಲಿಕೆ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ದಿವೌಷಧ: ದೇಹದಲ್ಲಿ ಹೆಚ್ಚುತ್ತೆ ಇನ್ಸುಲಿನ್, ಕ್ಯಾನ್ಸರ್ ಅಪಾಯವೂ ಕಡಿಮೆ!