ಬೆಂಗಳೂರು: ಪ್ರಕರಣಗಳ ಸಮಗ್ರ ಹಾಗೂ ಕೂಲಂಕಶ ತನಿಖೆಗಾಗಿ ಸಿಐಡಿ ರಚನೆಯಾದಾಗಿನಿಂದ ಆಯಾ ಸರ್ಕಾರಗಳು ಯಾವುದೇ ವಿಶೇಷ ತನಿಖಾ ತಂಡ (ಎಸ್ಐಟಿ)ಗಳನ್ನು ರಚಿಸಿರಲಿಲ್ಲ. ಆದರೆ ಇದೀಗ ವಿವಿಧ ಅಪರಾಧ ಪ್ರಕರಣಗಳ ತನಿಖೆ ನಡೆಸುವಂತೆ ಸಾಲು ಸಾಲು ಪ್ರತ್ಯೇಕ ಎಸ್ಐಟಿ ರಚಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಎಸ್ಐಟಿ ತಂಡ ರಚಿಸಿ ಆದೇಶ ಹೊರಡಿಸಿದೆ.
1974ರಲ್ಲಿ ಅಂದಿನ ಸರ್ಕಾರ ತನಿಖಾ ಸಂಸ್ಥೆ ಸ್ಥಾಪಿಸಿದ್ದು, 2009ರ ಬಳಿಕ ಅದನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಎಂದು ಮರುನಾಮಕರಣ ಮಾಡಲಾಯಿತು. 13 ವರ್ಷಗಳವರೆಗೂ ಸಿಐಡಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿಲ್ಲ. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಬಿಟ್ ಕಾಯಿನ್ ಹಗರಣ, ಪಿಎಸ್ಐ ನೇಮಕಾತಿ, ಹಾಸನದ ಪೆನ್ ಡ್ರೈವ್ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ ಹಾಗೂ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಒಟ್ಟು ಐದು ಎಸ್ಐಟಿ ರಚಿಸಲಾಗಿದೆ.
ರಾಜ್ಯದಲ್ಲಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೂ ಒಟ್ಟು 12ಕ್ಕಿಂತ ಹೆಚ್ಚು ಎಸ್ಐಟಿ ತಂಡಗಳು ಕಾರ್ಯನಿರ್ವಹಿಸಿವೆ. ಈ ಪೈಕಿ ಸಿಐಡಿಯಲ್ಲಿ ಐದು ಹಾಗೂ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ಆರು ಎಸ್ಐಟಿ ರಚಿಸಲಾಗಿತ್ತು. ಮುಖ್ಯವಾಗಿ ಅಬ್ದುಲ್ ಕರೀಂ ತೆಲಗಿಯ ಛಾಪಾ ಕಾಗದ ಹಗರಣ, ಬಳ್ಳಾರಿ ಅಕ್ರಮ ಗಣಿಗಾರಿಕೆ, ಮಾಜಿ ಲೋಕಾಯುಕ್ತ ವೈ.ಭಾಸ್ಕರ್ ರಾವ್ ಹಾಗೂ ಪುತ್ರನ ಲಂಚ ಪ್ರಕರಣ, ಗೌರಿ ಲಂಕೇಶ್ ಹತ್ಯೆ, ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸಿ.ಡಿ. ಪ್ರಕರಣ ಹಾಗೂ ಐಎಂಎ ವಂಚನೆ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಬಿಟ್ ಕಾಯಿನ್ ಕೇಸ್ ಎಸ್ಐಟಿ ತೆಕ್ಕೆಗೆ: ಹಿಂದಿನ ಸರ್ಕಾರದಲ್ಲಿದ್ದಾಗ ತೀವ್ರ ಕೋಲಾಹಲ ಎಬ್ಬಿಸಿದ್ದ ಬಿಟ್ ಕಾಯಿನ್ ಹಗರಣವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಸಮಗ್ರ ತನಿಖೆಗಾಗಿ ಎಸ್ಐಟಿ ರಚಿಸಿತ್ತು. ಪ್ರಕರಣದ ಸೂತ್ರಧಾರ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಸರ್ಕಾರಿ ಜಾಲತಾಣ ಹಾಗೂ ಆನ್ಲೈನ್ ಗೇಮಿಂಗ್ ಆ್ಯಪ್ಗಳನ್ನು ಹ್ಯಾಕ್ ಮಾಡಿ ಕ್ರಿಪ್ಟೋ ವ್ಯಾಲೆಟ್ ಮುಖಾಂತರ ಕೋಟ್ಯಾಂತರ ರೂಪಾಯಿ ವಹಿವಾಟು ಎಗರಿಸಿದ್ದ. ಅವ್ಯವಹಾರದ ಹಿಂದೆ ಬಿಜೆಪಿ ನಾಯಕರ ಕೈವಾಡವಿರುವುದಾಗಿ ಆಪಾದನೆ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಜುಲೈ 3ರಂದು ಎಸ್ಐಟಿಗೆ ಒಪ್ಪಿಸಿ ಸರ್ಕಾರ ಆದೇಶಿಸಿತ್ತು. ತನಿಖೆ ನಡೆಸುತ್ತಿರುವ ಏಳು ಪ್ರಕರಣಗಳಲ್ಲಿ ಎರಡು ಕೇಸ್ಗಳಲ್ಲಿ ನ್ಯಾಯಾಲಯಕ್ಕೆ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿ ತನಿಖೆ ಮುಂದುವರೆಸಿದೆ.
ಪಿಎಸ್ಐ ನೇಮಕಾತಿ ಹಗರಣ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದ 545 ಮಂದಿ ಪಿಎಸ್ಐ ನೇಮಕಾತಿಯಲ್ಲಿ ಅವ್ಯವಹಾರ ಸಂಬಂಧ ಆರಂಭದಲ್ಲಿ ನ್ಯಾ.ಬಿ.ವೀರಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದ್ದ ಸರ್ಕಾರವು ಸಮಿತಿ ನೀಡಿದ ಶಿಫಾರಸಿನ ಆಧಾರದ ಮೇರೆಗೆ ಎಸ್ಐಟಿ ರಚಿಸಿ ಇದೇ ವರ್ಷ ಮಾ.14ರಂದು ಆದೇಶಿಸಿತ್ತು. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಹಾಗೂ ಡಿವೈಎಸ್ಪಿ ಹಾಗೂ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾದ ಅಭ್ಯರ್ಥಿಗಳು ಸೇರಿದಂತೆ 115 ಮಂದಿಯನ್ನು ಎಸ್ಐಟಿ ಬಂಧಿಸಿತ್ತು.