ಬೆಂಗಳೂರು:ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಮರು ಗಣಿಗಾರಿಕೆ ಚಟುವಟಿಕೆ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ಇಂದು ಅನುಮತಿ ನೀಡಿದೆ. ನಿಷ್ಕ್ರಿಯವಾಗಿದ್ದ 1,304 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸುವ ಕೇಂದ್ರದ ಪ್ರಸ್ತಾವನೆಗೆ ಸರ್ಕಾರ ಸಹಮತಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ನಿಷ್ಕ್ರಿಯಗೊಂಡಿರುವ ಗಣಿಗುತ್ತಿಗೆ ಪ್ರದೇಶದ 13 Tailing dumpsನ 1,304 ಎಕರೆಯಲ್ಲಿ ವಿಶೇಷ ಅಧಿಕಾರ ಚಲಾಯಿಸಿ ಗಣಿಗುತ್ತಿಗೆ ಚಟುವಟಿಕೆ ಮುಂದುವರೆಸಲು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
2022-23ನೇ ಸಾಲಿನವರೆಗೆ 75.24 ಕೋಟಿ ರೂ ಹೊಣೆಗಾರಿಕೆ ಬಾಕಿ ಮೊತ್ತ ಹಾಗೂ 2023-24ನೇ ಸಾಲಿನ ಮೊತ್ತವನ್ನೂ ಸಹ ರಾಜ್ಯಕ್ಕೆ ಪಾವತಿಸುವಂತೆ ಕೆಜಿಎಫ್ನಲ್ಲಿರುವ ಭಾರತ್ ಚಿನ್ನದ ಗಣಿ ಸಂಸ್ಥೆಯವರಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದರು.
ಗಾಂಧೀಜಿ ಜೊತೆಗೆ ಅಂಬೇಡ್ಕರ್ ಭಾವಚಿತ್ರ: ನವೆಂಬರ್ 26ರ ಸಂವಿಧಾನ ದಿನಾಚರಣೆ ಮತ್ತು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೂ ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾವಚಿತ್ರದೊಂದಿಗೆ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನೂ ಸಹ ಕಡ್ಡಾಯವಾಗಿ ಇಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರ ಕೊರತೆ ಬಗ್ಗೆ ಚರ್ಚೆ:ಉಪನ್ಯಾಸಕರ ಕೊರತೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಲವು ಹಳೆ ವಿವಿಗಳಲ್ಲಿ ನಿವೃತ್ತರಾದ ಬಳಿಕ ಖಾಲಿ ಹುದ್ದೆಗಳನ್ನು ತುಂಬಿಲ್ಲ. ವೇತನ, ಪಿಂಚಣಿಗೆ ಸಮಸ್ಯೆಯಾಗಿದೆ. ಜ್ಞಾನದ ಕೊಡು-ಕೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಪುಟ ಉಪಸಮಿತಿ ರಚಿಸಿ, ಪರಿಹಾರ ಹುಡುಕಲು ನಿರ್ಣಯಿಸಲಾಗಿದೆ ಎಂದರು.
ನೀಟ್ ಅಕ್ರಮ: ಸಂಪುಟ ಸಭೆಯಲ್ಲಿ ನೀಟ್ ಅಕ್ರಮದ ಬಗ್ಗೆಯೂ ಕಳವಳ ವ್ಯಕ್ತವಾಯಿತು. ತಮಿಳುನಾಡಿನ ರೀತಿ ರಾಜ್ಯದಲ್ಲೂ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಉನ್ನತ ಶಿಕ್ಷಣ ಸಚಿವರು ಸರ್ಕಾರದ ನಿಲುವನ್ನು ಮುಂದೆ ತಿಳಿಸುತ್ತಾರೆ ಎಂದು ಹೇಳಿದರು.
ಇತರೆ ತೀರ್ಮಾನಗಳು:ವಿಶ್ವವಿದ್ಯಾಲಯಗಳಲ್ಲಿ ರಾಜ್ಯದಲ್ಲಿ ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ ಯೋಜನೆಯನ್ನು ಆಯಾಯ ವಿಶ್ವವಿದ್ಯಾಲಯಗಳ ವಿಸ್ತೃತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ (ಬೆಂಗಳೂರು), ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ), ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ), ಮಂಗಳೂರು ವಿಶ್ವವಿದ್ಯಾಲಯ (ಮಂಗಳೂರು), ಕಲಬುರಗಿ ವಿಶ್ವವಿದ್ಯಾಲಯ (ಕಲಬುರಗಿ) ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ (ಬೆಂಗಳೂರು)ಗಳಲ್ಲಿ ಕೇಂದ್ರದ ವಂತಿಕೆ ರೂ.167.86 ಕೋಟಿ ಮತ್ತು ರಾಜ್ಯದ ವಂತಿಕೆ ರೂ. 111.91 ಕೋಟಿ ಒಟ್ಟು ರೂ.279.77 ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ.
- ರಾಜ್ಯದ 46,829 ಸರ್ಕಾರಿ ಶಾಲೆಗಳು ಮತ್ತು 1,234 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಯೋಜನೆಯನ್ನು 29.19 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು (ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರೂ.25.85 ಕೋಟಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ.3.34 ಕೋಟಿ) ಸಚಿವ ಸಂಪುಟ ನಿರ್ಧಾರ.