ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ನೀಡುವ ಚೀಟಿ(ಪ್ರಿಸ್ಕ್ರಿಪ್ಶನ್)ಯನ್ನು ಕನ್ನಡದಲ್ಲಿ ಬರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸಮಾನ ಮನಸ್ಕರ ಜೊತೆ ಸಂವಾದ ಬಳಿಕ ಸುದ್ದಿಗಾರರೊಂದದಿಗೆ ಮಾತನಾಡಿದ ಅವರು ಇತ್ತೀಚೆಗೆ ರಾಯಚೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಇಂಗ್ಲಿಷ್‌ನಲ್ಲಿ ವೈದ್ಯರ ಚೀಟಿಯಿಂದ ಉಂಟಾಗುವ ತೊಂದರೆಯ ಬಗ್ಗೆ ಆಸ್ಪತ್ರೆ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸಂಬಂಧಿತರಿಗೆ ನೋಟಿಸ್ ನೀಡಲಾಗಿದೆ. ಆದ್ದರಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಚೀಟಿಯನ್ನು ಕನ್ನಡದಲ್ಲೇ ಬರೆಯುವಂತೆ ಸೂಚಿಸಲಾಗಿದೆ. ಮುಂದೆ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೂ ಈ ಆದೇಶವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಕೈಗಾರಿಕಾ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಅವಕಾಶಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿ ಶಾಸನ ಆಗಬೇಕು. ಆಗ ಮಾತ್ರ ಸ್ಥಳೀಯರಿಗೆ ಉದ್ಯೋಗವು ಸಿಗಲು ಸಾಧ್ಯವಿದೆ. ಹೀಗಾಗಿ ಡಾ. ಸರೋಜಿನಿ ಮಹಿಷಿ ಶಿಫಾರಸನ್ನು ಮುಂದಿನ ಅಧಿವೇಶನದಲ್ಲಿ ಸರ್ಕಾರ ಶಾಸನವಾಗಿ ರೂಪಿಸಲು ಮುಂದಾಗಬೇಕು ಎಂದು ಹೇಳಿದರು.
ಡಾ.ಸರೋಜಿನಿ ಮಹಿಷಿ ವರದಿಯಲ್ಲಿ 58 ವಿಭಾಗಗಳಿದ್ದು, ಈ ಕಾಲಕ್ಕೆ ಕೇವಲ 14 ವಿಭಾಗಗಳು ಮಾತ್ರ ಅನುಷ್ಠಾನಕ್ಕೆ ಯೋಗ್ಯವಾಗಿವೆ. ಹಾಗಾಗಿ ಈ ವರದಿಯ ಯಥಾವತ್ ಜಾರಿ ಸಾಧ್ಯವಾಗದು. ಈ 14 ವಿಭಾಗಗಳ ಶಿಫಾರಸನ್ನು ಅನುಷ್ಠಾನಕ್ಕೆ ತರಬೇಕಾದರೆ ವರದಿಯು ಶಾಸನವಾಗಿ ಬದಲಾಗಬೇಕು. ಅದಕ್ಕಾಗಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆಯಾಗಿ ಬಳಿಕ ಶಾಸನ ರೂಪ ಪಡೆಯಬೇಕು. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಎಲ್ಲ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಈ ವರದಿ ಕಾನೂನು ರೂಪ ಪಡೆದರೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ. 70 ರಷ್ಟು ಉದ್ಯೋಗ ಕಾನೂನು ಬದ್ಧವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಈ ರೀತಿ ಕಾಯ್ದೆ ಜಾರಿಯಾದರೆ ಹೊಸ ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ತೊಂದರೆಯಾಗುವುದಿಲ್ಲ. ತಮಿಳುನಾಡಿನಲ್ಲಿ ಸ್ಥಳೀಯ ಉದ್ಯೋಗ ನೀತಿ ಇಲ್ಲದಿದ್ದರೂ ಅಲ್ಲಿನವರಿಗೆ ಉದ್ಯೋಗದಲ್ಲಿ ಕಂಪನಿಗಳು ಆದ್ಯತೆ ನೀಡುತ್ತವೆ. ಹಾಗೆಯೇ ಕರ್ನಾಟಕದಲ್ಲೂ ಆಗುತ್ತಿಲ್ಲ. ಅದಕ್ಕಾಗಿ ಈ ಕಾಯ್ದೆ ಜಾರಿಗೊಳ್ಳಬೇಕಾದ ಅಗತ್ಯತೆ ಇದೆ. ರಾಜ್ಯದಲ್ಲಿರುವ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲವರನ್ನು ನೇಮಕ ಮಾಡುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸ್ಥಳೀಯ ಸಾಮಾನ್ಯರ ಒಡನಾಟ ಹೊಂದಿರುವ ಬ್ಯಾಂಕ್, ಆಸ್ಪತ್ರೆ ಹಾಗೂ ಪಶು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ತಿಳಿದಿರುವವರ ಅಗತ್ಯವಿದೆ. ಡಾ.ಸರೋಜಿನಿ ಮಹಿಷಿ ವರದಿಯಲ್ಲೂ ಇದರ ಉಲ್ಲೇಖ ಇದೆ. ನವೆಂಬರ್ 1 ರೊಳಗೆ ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡ ಬಲ್ಲ ಒಬ್ಬರಾದರೂ ಇರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕನ್ನಡ ಅನುಷ್ಠಾನ ಸಮಿತಿಗಳು ಇದ್ದು, ಅವುಗಳ ಮೂಲಕ ಜಿಲ್ಲಾಡಳಿತ ಅಧೀನದ ಎಲ್ಲ ಇಲಾಖೆಗಳಲ್ಲೂ ಕನ್ನಡ ಕಡ್ಡಾಯ ಅನುಷ್ಠಾನಕ್ಕೆ ಸೂಚನೆ ನೀಡಲಾಗಿದೆ. ನವೆಂಬರ್ 1 ರೊಳಗೆ ಎಲ್ಲ ಜಿಲ್ಲೆಗಳಲ್ಲೂ ಇದನ್ನು ಕಡ್ಡಾಯವಾಗಿ ಕಾರ್ಯರೂಪಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.
ಕನ್ನಡ ಕ್ಲಾಸಿಕಲ್ ಸೆಂಟರ್‌ಗೆ ಪ್ರಯತ್ನ:ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭಿಸಿದರೂ ಕನ್ನಡ ಕ್ಲಾಸಿಕಲ್ ಸೆಂಟರ್‌ನ್ನು ಕರ್ನಾಟಕಕ್ಕೆ ಪಡೆಯಲು ಸಾಧ್ಯವಾಗಿಲ್ಲ. ಇದು ಕೇಂದ್ರ ಯೋಜನೆ ಆಗಿರುವುದರಿಂದ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಜಾಗ ನೀಡಬೇಕು. ಈಗಾಗಲೇ ಕೇರಳ ತನಗೆ ಬೇಡ ಎಂದಿದೆ, ಕರ್ನಾಟಕ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಕ್ಲಾಸಿಕಲ್ ಸೆಂಟರ್‌ನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಆಯಾ ಊರಿಗೆ ನಾಮಫಲಕ:ಕರ್ನಾಟಕದಲ್ಲಿ 65 ಸಾವಿರ ಹೆಸರುಳ್ಳ ಊರುಗಳಿವೆ. ಇವುಗಳಲ್ಲಿ ಕೆಲವು ಹೆಸರುಗಳು ಮೂಲವನ್ನು ಕೆಡಿಸಿಕೊಂಡುಬಿಟ್ಟಿವೆ. ಊರಿನ ಮೂಲ ಹೆಸರುಗಳಿಗೆ ಕಾಪಿರೈಟ್ ಇಲ್ಲ. ಹಾಗಾಗಿ ಊರಿನ ಹೆಸರುಗಳು ಬದಲಾವಣೆಗೊಂಡದ್ದೂ ಇದೆ. ಈ ನಿಟ್ಟಿನಲ್ಲಿ ಆರು ಲಕ್ಷ ಎನ್‌ಎಸ್‌ಎಸ್ ಹಾಗೂ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳ ನೆರವಿನಲ್ಲಿ ಆಯಾ ಊರುಗಳ ಹೆಸರನ್ನು ನಾಮಫಲಕ ಮೂಲಕ ಪುನರ್ ಸ್ಥಾಪಿಸುವ ಕೆಲಸ ಶೀಘ್ರವೇ ನಡೆಯಲಿದೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಕೆಪಿಎಸ್‌ಸಿ ನಡೆಸಿದ ಪ್ರೊಬೆಷನರಿ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆಪತ್ರಿಕೆಯನ್ನು ತಪ್ಪಾಗಿ ಮುದ್ರಿಸಿ 1.35 ಲಕ್ಷ ಕನ್ನಡಿಗ ವಿದ್ಯಾರ್ಥಿಗಳ ಉದ್ಯೋಗಾಕಾಂಕ್ಷೆಗೆ ತಣ್ಣೀರು ಎರಚಲಾಗಿದೆ. ಈ ಬಗ್ಗೆ ಪ್ರಾಧಿಕಾರದ ನೋಟಿಸ್‌ಗೆ ಕೆಪಿಎಸ್‌ಸಿ ಉತ್ತರಿಸಿದೆ. ಈ ಉತ್ತರವನ್ನು ಪರಿಶೀಲಿಸಿ ಎರಡ್ಮೂರು ದಿನದಲ್ಲಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು. ಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದರಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಸೂಚಿಸುವಂತೆ ಸರ್ಕಾರವನ್ನು ಕೋರಲಾಗುವುದು ಎಂದು ಅವರು ಹೇಳಿದರು.
ಶತಮಾನ ಶಾಲೆಗಳ ಸರ್ವೆ:ಕರ್ನಾಟಕದಲ್ಲಿ 236 ಶತಮಾನ ಆಚರಿಸಿದ ಶಾಲೆಗಳಿವೆ. ಅವುಗಳ ಸ್ಥಿತಿಗತಿ ಬಗ್ಗೆ ಸರ್ವೆ ನಡೆಸಿ ವರದಿ ತಯಾರಿಸುವಂತೆ ಪ್ರತ್ಯೇಕ ಕಮಿಟಿ ರಚಿಸಲಾಗಿದೆ. ಶಾಲೆಗಳ ಅಭ್ಯುದಯಕ್ಕೆ ಕಂಪನಿಗಳ ಸಿಎಸ್‌ಆರ್ ನಿಧಿ ಬಳಕೆ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ ಕನ್ನಡ ಅಲ್ಲದೆ ಇತರೆ 320 ಬಗೆಯ ಭಾಷೆಗಳಿವೆ. ಇವುಗಳ ಬಗ್ಗೆ ಸದ್ಯ ನೂರು ಪುಸ್ತಕಗಳನ್ನು ಹೊರತರುವ ಯೋಜನೆ ರೂಪಿಸಲಾಗಿದೆ. ತಲಾ 72 ಪುಟಗಳ, ಸರಳ ಭಾಷೆಯಲ್ಲಿ ಪರಿಚಯಾತ್ಮಕವಾಗಿ ಈ ಪುಸ್ತಕಗಳು ಇರಲಿದ್ದು, ಡಿಸೆಂಬರ್‌ಗೆ ಬಿಡುಗಡೆಗೊಳಿಸುವ ಇರಾದೆ ಇದೆ. ಪುಸ್ತಕದ ಪರಿಕಲ್ಪನೆ, ರಚನೆ ಬಗ್ಗೆ ಒಂದು ಸಾವಿರ ಮಂದಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮಾಹಿತಿ ನೀಡಿದರು.
ಇದನ್ನೂ ಓದಿ:ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಗ್ರಾಮಸ್ಥರಿಗೆ ಬೋರ್ವೆಲ್ ಗಿಫ್ಟ್ ಕೊಟ್ಟ ಅಭಿಮಾನಿ! - Sudeep Birthday Special